ಮಂಡ್ಯ || ಮಂಡ್ಯದ ಕಲ್ಲಹಳ್ಳಿಗೆಯ Bhuvarahanatha ನಿಗೆ ವಿಶೇಷ ಪೂಜೆ: ಯಾಕೆ?

ಮಂಡ್ಯ: ರೇವತಿ ನಕ್ಷತ್ರ ಹಾಗೂ ವರಹಾ ಜಯಂತಿಯು ಒಂದೇ ದಿನದ ಏಕಕಾಲದಲ್ಲಿ ಬಂದಿರುವ ಹಿನ್ನಲೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವರಹನಾಥ ಕಲ್ಲಹಳ್ಳಿಯ ಆರಾಧ್ಯದೈವ ಭೂದೇವಿ ಸಮೇತ ಶ್ರೀಲಕ್ಷ್ಮೀವರಹನಾಥಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆಯನ್ನು ಮಾಡಲಾಗಿದ್ದು, ಈ ವೇಳೆ ಭಕ್ತ ಸಾಗರವೇ ಹರಿದು ಬಂದಿತು.

ಈ ವೇಳೆ ಭೂದೇವಿ ಸಮೇತ ಶ್ರೀಲಕ್ಷ್ಮೀವರಹನಾಥಸ್ವಾಮಿಗೆ ಪವಿತ್ರ ಗಂಗಾಜಲ, ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಕಬ್ಬಿನ ಹಾಲು, ಐನೂರು ಲೀಟರ್ ಎಳನೀರು, ಹಸುವಿನ ತುಪ್ಪ, ಜೇನುತುಪ್ಪ, ಶ್ರೀಗಂಧ, ಅರಿಶಿನ, ಸುಗಂಧ ದ್ರವ್ಯಗಳಿಂದ ಅಭಿಷೇಕ ಮಾಡಿ ಮಲ್ಲಿಗೆ, ಜಾಜಿ, ಸಂಪಿಗೆ, ಸೇವಂತಿಗೆ, ಧವನ, ಪವಿತ್ರ ಪತ್ರೆಗಳು, ತುಳಸಿ, ಗುಲಾಬಿ, ಕಮಲ ಸೇರಿದಂತೆ 58 ಬಗೆಯ ವಿಶೇಷ ಹೂವುಗಳಿಂದ ಪುಪ್ಪಾಭಿಷೇಕ ನಡೆಸಿ, ಪಟ್ಟಾಭಿಷೇಕ ಮಾಡಿ ದೇವಾಲಯದ ಸುತ್ತಲೂ ಅಡ್ಡ ಪಲ್ಲಕಿ ಉತ್ಸವ ನಡೆಸಿ ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಇದೇ ವೇಳೆ ಹೋಳಿಗೆ, ಪುಳಿಯೋಗರೆ, ಸಿಹಿಪೊಂಗಲ್, ಮೊಸರನ್ನ ಹಾಗೂ ಬಿಸಿಬೇಳೆ ಬಾತ್ ಪ್ರಸಾದ ಸವಿದ 25ಸಾವಿರಕ್ಕೂ ಹೆಚ್ಚಿನ ಭಕ್ತರು ಭೂದೇವಿ ಸಮೇತ ಶ್ರೀ ಲಕ್ಷ್ಮೀವರಹನಾಥ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ದೇವಾಲಯ ವ್ಯವಸ್ಥಾಪನಾ ಸಮಿತಿಯ ಸಂಚಾಲಕರಾದ ಡಾ.ಶ್ರೀನಿವಾಸರಾಘವನ್ ಪೂಜಾ ಕಾರ್ಯಕ್ರಮಗಳ ನೇತೃತ್ವ ವಹಿಸಿ ಮಾತನಾಡಿ ‘ರೇವತಿ ನಕ್ಷತ್ರ ಹಾಗೂ ವರಹಾ ಜಯಂತಿಯು ಒಂದೇ ದಿನದ ಏಕಕಾಲದಲ್ಲಿ ಬಂದಿರುವ ಈ ಶುಭ ದಿನದಲ್ಲಿ ಭೂ ವ್ಯಾಜ್ಯಗಳ ಪರಿಹಾರಕ ಹಾಗೂ ಲೋಕರಕ್ಷಕನಾದ ವರಹಾ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಹೋಮ ಹವನದ ಮೂಲಕ ಲೋಕದ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಗಿದೆ’ ಎಂದರು.

‘150 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭೂ ವರಾಹನಾಥ ಸ್ವಾಮಿಗೆ ತಿರುಮಲ ತಿರುಪತಿಯ ಮಾದರಿಯಲ್ಲಿ ಮೂರು ಪ್ರಾಕಾರಗಳ ದೇವಾಲಯವನ್ನು ಸಂಪೂರ್ಣವಾಗಿ ಗ್ರಾನೈಟ್ ಕಲ್ಲಿನಿಂದ ಹೊಯ್ಸಳ ವಾಸ್ತು ವೈಭವದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಇನ್ನು ಮೂರು ವಾರಗಳಲ್ಲಿ ದೇವಾಲಯದ ಕೆಲಸವನ್ನು ಸಂಪೂರ್ಣಗೊಳಿಸಲು ಸಂಕಲ್ಪ ಮಾಡಿರುವ ಪರಕಾಲ ಸ್ವಾಮಿಗಳು, ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಎಲ್ಲಾ ರೀತಿಯ ಅನುಕೂಲಗಳನ್ನು ಒದಗಿಸಿಕೊಡಲು ಕಾರ್ಯಕ್ರಮ ರೂಪಿಸಿದ್ದಾರೆ’ ಎಂದು ಹೇಳಿದರು.

ಇನ್ನೊಂದೆಡೆ ಕೃಷ್ಣರಾಜಪೇಟೆ ಗ್ರಾಮದೇವತೆ ಶ್ರೀ ದೊಡ್ಡಕೇರಮ್ಮನವರ ವೈಭವದ ಬ್ರಹ್ಮರಥೋತ್ಸವವು ಅದ್ದೂರಿಯಾಗಿ ನಡೆಯಿತು. ಐದು ವರ್ಷಗಳ ನಂತರ ನಡೆದ ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿ ಸಂಭ್ರಮಿಸಿದ್ದಾರೆ. ಶ್ರೀ ರಥದ ಕಳಸಕ್ಕೆ ಭಕ್ತರು ಹಣ್ಣು ಜವನ ಎಸೆದು ಭಕ್ತಿ ಮೆರೆದಿದ್ದಾರೆ. ಶ್ರೀರಥವು ಯಾವುದೇ ಅಡ್ಡಯಿಲ್ಲದೇ ನಗರ ಪ್ರದಕ್ಷಿಣೆ ಹಾಕಿ ಸ್ವಸ್ಥಾನವನ್ನು ಸೇರಿದ್ದು, ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *