ಮಂಡ್ಯ || ಮಂಡ್ಯದ ಕುಪ್ಪಳ್ಳಿಯಲ್ಲಿ ಟ್ಯಾಂಕ್ ಇದ್ದರೂ ನೀರಿಲ್ಲ..ಯಾಕೆ ಗೊತ್ತಾ?

ಮಂಡ್ಯ || ಮಂಡ್ಯದ ಕುಪ್ಪಳ್ಳಿಯಲ್ಲಿ ಟ್ಯಾಂಕ್ ಇದ್ದರೂ ನೀರಿಲ್ಲ..ಯಾಕೆ ಗೊತ್ತಾ?

ಮಂಡ್ಯ : ಇವತ್ತಿಗೂ ರಾಜ್ಯದ ಹಲವು ಜಿಲ್ಲೆಗಳ ಗ್ರಾಮೀಣ ಪ್ರದೇಶದಲ್ಲಿ ಮನೆ, ಮನೆಗೆ ನೀರು ಸರಬರಾಜು ಮಾಡುವ ನೀರಿನ ಟ್ಯಾಂಕ್ ಗಳು ದುಸ್ಥಿತಿಯಲ್ಲಿವೆ. ಮತ್ತೆ ಕೆಲವು ಕಳಪೆ ಕಾಮಗಾರಿಯಿಂದಾಗಿ ಶಿಥಿಲಾವಸ್ಥೆಗೆ ತಲುಪಿವೆ. ಇನ್ನೊಂದಷ್ಟು ಉದ್ಘಾಟನೆಯಾಗದೆ ಉಳಿದಿವೆ. ಹೀಗಾಗಿ ಕುಡಿಯುವ ನೀರಿಗೆ ಒಂದೊಂದು ಊರಿನಲ್ಲಿ ಒಂದೊಂದು ರೀತಿಯ ಪರದಾಟ ಇದ್ದೇ ಇದೆ. ಎಲ್ಲರ ಮನೆ, ಮನೆಗೂ ನೀರು ತಲುಪಬೇಕೆಂಬ ಸಂಕಲ್ಪ ಕೆಲವು ಕಡೆಗಳಲ್ಲಿ ಮರೀಚಿಕೆಯಾಗುತ್ತಿದೆ. ಇದಕ್ಕೆ ಸಾಕ್ಷಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಪ್ಪಳ್ಳಿ ಗ್ರಾಮವಾಗಿದೆ.

ಕುಪ್ಪಳ್ಳಿಯಲ್ಲಿ ಜಲಜೀವನ್ ಮಿಷನ್ ಯೋಜನೆ ಹಳ್ಳಹಿಡಿದಿದೆ ಎಂಬುದಕ್ಕೆ ಕಳೆದ ನಾಲ್ಕು ವರ್ಷಗಳಿಂದ ಉದ್ಘಾಟನೆಗೊಳ್ಳದೆ ನಿಂತಿರುವ ವಾಟರ್ ಟ್ಯಾಂಕ್ ನಿದರ್ಶನವಾಗಿದೆ. ಬಹಳಷ್ಟು ಯೋಜನೆಗಳ ಕಾಮಗಾರಿಗಳನ್ನು ಆರಂಭಿಸುವಾಗ ಇರುವ ಉತ್ಸಾಹ ಅದನ್ನು ಪೂರ್ಣಗೊಳಿಸಿ ಜನರಿಗೆ ಅರ್ಪಿಸುವ ತನಕ ಉಳಿಯುವುದೇ ಇಲ್ಲ. ಜತೆಗೆ ಕಳಪೆ ಕಾಮಗಾರಿಗಳಿಂದಾಗಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುವುದೇ ಇಲ್ಲ.

ಕುಪ್ಪಳ್ಳಿಯಲ್ಲಿ ಆಗಿರುವುದು ಕೂಡಾ ಇದೇ..ಎಲ್ಲರ ಮನೆ ಮನೆಗೂ ನೀರು ತಲುಪಬೇಕೆಂದು ಆರಂಭಿಸಿರುವ ಜಲಜೀವನ್ ಮಿಷನ್ ಯೋಜನೆ ಸದ್ದಿಲ್ಲದೆ ನಿಂತುಹೋಗಿದೆ. ಬಹುತೇಕ ಮನೆಗಳ ಮುಂದೆ ನೀರಿನ ಸಂಪರ್ಕ ವ್ಯವಸ್ಥೆ ಮಾಡದೆ ಕೇವಲ ನಾಮಕಾವಸ್ಥೆಗೆ ನಲ್ಲಿ ನಿರ್ಮಿಸಿ ಹೋಗಿರುವ ಘಟನೆ ರಾಜ್ಯದ ಬಹುತೇಕ ಕಡೆಗಳಲ್ಲಿ ನಡೆದಿದೆ. ಕುಪ್ಪಳ್ಳಿ ಗ್ರಾಮದ ನೀರಿನ ಕಥೆಯನ್ನು ಹೇಳುವುದಾದರೆ ಈ ಹಿಂದೆ ಶಾಸಕರಾಗಿದ್ದ ಸಿ.ಎಸ್.ಪುಟ್ಟರಾಜುರವರ ಆಡಳಿತಾವಧಿಯಲ್ಲಿ ಕುಪ್ಪಳ್ಳಿ ಗ್ರಾಮದ ಜನರಿಗೆ ಶಾಶ್ವತ ಕುಡಿಯುವ ನೀರು ಸರಬರಾಜು ಮಾಡಬೇಕೆಂಬ ಮಹಾದಾಸೆಯಿಂದ ಜಿಲ್ಲಾ ಪಂಚಾಯತ್ ಮಂಡ್ಯ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಪಾಂಡವಪುರ ವತಿಯಿಂದ ಸುಮಾರು 19 ಲಕ್ಷ 75,ಸಾವಿರ ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಅಡಿ ಸುಮಾರು 25,000 ಲೀಟರ್ ಸಾಮರ್ಥ್ಯವುಳ್ಳ ನೀರಿನ ಟ್ಯಾಂಕ್ ನಿರ್ಮಿಸಲು ಯೋಜನೆ ಕೈಗೊಳ್ಳಲಾಗಿತ್ತು. ಅದರಂತೆ ಟ್ಯಾಂಕ್ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸಿ ಕುಪ್ಪಳ್ಳಿ ಗ್ರಾಮದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಹಾಗೂ ಕಾಮಗಾರಿಯ ಗುತ್ತಿಗೆದಾರರಾದ ಸೋಮಶೇಖರ್ ಅವರಿಗೆ ಸೂಚನೆ ನೀಡಿದ್ದು ಅವತ್ತಿನ ಕಥೆಯಾಗಿದೆ.

ಉದ್ಘಾಟನೆಗೆ ಮುನ್ನವೇ ಸೋರಿದ ನೀರಿನ ಟ್ಯಾಂಕ್ ಈ ಸಂಬಂಧ 2022ನೇ ಸಾಲಿನಲ್ಲಿ ಕಾಮಗಾರಿಯನ್ನು ಪ್ರಾರಂಭಿಸಿ ನೀರಿನ ಟ್ಯಾಂಕ್ ನಿರ್ಮಿಸಲಾಯಿತು. ಆ ನಂತರದ ದಿನಗಳಲ್ಲಿ ಗುಣಮಟ್ಟದ ಪರಿಶೀಲನೆಗಾಗಿ ಗ್ರಾಮಸ್ಥರ ಸಮ್ಮುಖದಲ್ಲಿ ನೀರನ್ನು ತುಂಬಿಸಿದಾಗ ನೀರು ಟ್ಯಾಂಕ್ ನಲ್ಲಿ ನಿಲ್ಲಲಿಲ್ಲ ಸೋರುತ್ತಿರುವುದನ್ನು ಕಂಡು ಗ್ರಾಮಸ್ಥರು ಕಳಪೆ ಕಾಮಗಾರಿಯಾಗಿದೆ ಎಂದು ಆರೋಪಿಸಿದ್ದರಲ್ಲದೆ, ನೀರಿನ ಟ್ಯಾಂಕ್ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಶಾಶ್ವತ ಕುಡಿಯುವ ನೀರು ಒದಗಿಸಬೇಕಾಗಿ ಗ್ರಾಮ ಪಂಚಾಯಿತಿಗೆ, ಜಿಲ್ಲಾ ಪಂಚಾಯತ್ ಉಪ ವಿಭಾಗಕ್ಕೆ ನೀರಿಗಾಗಿ ಮನವಿ ಮಾಡಿದರು. ಆದರೆ ಜನರ ಮನವಿಗೆ ಸ್ಪಂದಿಸುವುದಿರಲಿ ಯಾರೂ ಈ ಕಡೆ ತಲೆ ಹಾಕಲಿಲ್ಲ. ಪರಿಣಾಮ ಕಳೆದ 4 ವರ್ಷಗಳಿಂದ ಟ್ಯಾಂಕ್ ಪಾಳು ಬಿದ್ದಿದೆ. ಈ ಟ್ಯಾಂಕ್ ನ ಜತೆಯಲ್ಲಿ ಒಂದೊಳ್ಳೆಯ ಯೋಜನೆಯೂ ನೆನೆಗುದಿಗೆ ಬಿದ್ದಂತೆ ಕಾಣಿಸುತ್ತಿದೆ. ಸಾಮಾನ್ಯವಾಗಿ ಚುನಾವಣೆ ಬಂದಾಗ ಗ್ರಾಮಗಳಿಗೆ ಬಂದು ಆಶ್ವಾಸನೆಗಳ ಕಾಗೆ ಹಾರಿಸುವ ನಾಯಕರು ಚುನಾವಣೆ ನಂತರ ತಮಗೆ ಸಂಬಂಧವೇ ಇಲ್ಲ ಎಂಬಂತೆ ಮೌನಕ್ಕೆ ಜಾರಿ ಬಿಡುತ್ತಾರೆ. ಮೊದಲಿನಿಂದಲೂ ಕುಪ್ಪಳ್ಳಿ ಕುಪ್ಪಳ್ಳಿ ಗ್ರಾಮಕ್ಕೆ ಕೆರೆತೊಣ್ಣೂರು ಗ್ರಾಮದ ಕೆರೆಯಿಂದ ನೀರು ಸರಬರಾಜು ಮಾಡುತ್ತಿದ್ದು ಹೀಗಾಗಿ ಇಲ್ಲಿನ ಜನರು ಜಲಜೀವನ್ ಯೋಜನೆ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ ಆದರೀಗ ಕಳೆದ ಕೆಲವು ದಿನಗಳಿಂದ ಕಾರಣಾಂತರಗಳಿಂದ ಗ್ರಾಮಕ್ಕೆ ನೀರು ಸರಬರಾಜಾಗುತ್ತಿಲ್ಲ.

ಗ್ರಾಮಸ್ಥರಿಗೆ ಶಾಸಕ ದರ್ಶನ್ ಪುಟ್ಟಣಯ್ಯ ಸ್ಪಂದನೆ ಇದರಿಂದ ಬೆಚ್ಚಿಬಿದ್ದ ಗ್ರಾಮದ ಜನ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರ ಬಳಿ ತೆರಳಿ ನೀರಿನ ಪರಿಸ್ಥಿತಿಯನ್ನು ವಿವರಿಸಿ ತಮ್ಮ ಸಂಕಷ್ಟವನ್ನು ತೋಡಿಕೊಂಡಿದ್ದರಿಂದ ತಕ್ಷಣವೇ ಕುಪ್ಪಳ್ಳಿ ಗ್ರಾಮಕ್ಕೆ ಕುಡಿಯುವ ನೀರು ಕಲ್ಪಿಸಲು ಹೊಸ ಬೋರ್ ವೆಲ್ ಕೊರಸಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದಾರೆ. ಈ ವಿಚಾರದಲ್ಲಿ ಶಾಸಕರ ಕಾರ್ಯ ಶ್ಲಾಘನೀಯವಾಗಿದೆ. ಇದರ ಜತೆಗೆ ಇದೀಗ ಗ್ರಾಮದಲ್ಲಿ ಹಿಂದೆ ನಿರ್ಮಿಸಿರುವ ನೀರಿನ ಟ್ಯಾಂಕ್ ಕಾಮಗಾರಿ ಕುರಿತು ಸಂಪೂರ್ಣ ಮಾಹಿತಿ ಪಡೆದು ಅದನ್ನು ಶೀಘ್ರದಲ್ಲಿ ದುರಸ್ತಿಪಡಿಸುವ ಭರವಸೆ ನೀಡಿದ್ದಾರೆ.

ಒಂದು ವೇಳೆ ಶಾಸಕರು ಮನಸ್ಸು ಮಾಡಿ ಈಗಾಗಲೇ ನಿರ್ಮಾಣಗೊಂಡು ಉಪಯೋಗಕ್ಕೆ ಬಾರದೆ ನಿಂತಿರುವ ಟ್ಯಾಂಕ್ ನ್ನು ಪರಿಶೀಲಿಸಿ, ಅದನ್ನು ದುರಸ್ತಿ ಮಾಡಿ ಸಾರ್ವಜನಿಕ ಉಪಯೋಗಕ್ಕೆ ಬರುವಂತೆ ಮಾಡಿದರೆ ಸುಮಾರು 19ಲಕ್ಷ ರೂಪಾಯಿಯ ಟ್ಯಾಂಕ್ ಪ್ರಯೋಜನಕ್ಕೆ ಬರಲಿದೆ. ಇಲ್ಲದೆ ಹೋದರೆ ಜನರ ಹಣ ನೀರಿನಲ್ಲಿ ಕೊಚ್ಚಿ ಹೋದಂತೆ ಆಗಲಿದೆ. ಆದಷ್ಟು ಬೇಗ ಈ ವಿಚಾರದಲ್ಲಿ ಶಾಸಕರು ಕಾಳಜಿ ವಹಿಸಿ, ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಕುಪ್ಪಳ್ಳಿ ಗ್ರಾಮದ ನೀರಿನ ಸಮಸ್ಯೆಗೆ ಇತಿಶ್ರೀ ಹಾಡಬೇಕಿದೆ. ಇದು ಆದಷ್ಟು ಬೇಗ ಆಗುತ್ತದೆ ಎಂಬ ನಂಬಿಕೆಯಲ್ಲಿ ಗ್ರಾಮಸ್ಥರಿದ್ದಾರೆ.

Leave a Reply

Your email address will not be published. Required fields are marked *