ಮಂಗಳೂರು || ಮಂಗಳೂರಿಗೆ ಭೇಟಿ ನೀಡುವವರ ಗಮನಕ್ಕೆ: ಈ ರಸ್ತೆ ಏಪ್ರಿಲ್ 30ರ ತನಕ ಬಂದ್

ಮಂಗಳೂರು || ಮಂಗಳೂರಿಗೆ ಭೇಟಿ ನೀಡುವವರ ಗಮನಕ್ಕೆ: ಈ ರಸ್ತೆ ಏಪ್ರಿಲ್ 30ರ ತನಕ ಬಂದ್

ಮಂಗಳೂರು: ಕರ್ನಾಟಕದ ಕರಾವಳಿ ನಗರ ಮಂಗಳೂರಿಗೆ ಭೇಟಿ ನೀಡುವವರು ತಪ್ಪದೇ ಈ ಸುದ್ದಿಯನ್ನು ಓದಿ. ಏಪ್ರಿಲ್ 1 ರಿಂದ 30ರ ತನಕ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ. ಈ ಕುರಿತು ಮಂಗಳೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿಯನ್ನು ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾಮಗಾರಿ ಹಿನ್ನಲೆಯಲ್ಲಿ ರಸ್ತೆಯನ್ನು ಬಂದ್ ಮಾಡಲಾಗಿದೆ.

ಮಂಗಳೂರು ನಗರದಿಂದ ಕೇರಳ ರಾಜ್ಯಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರ ಹಳೆಯ ನೇತ್ರಾವತಿ ಸೇತುವೆಯಲ್ಲಿ (ತಲಪಾಡಿ – ಮಂಗಳೂರು ನಗರಕ್ಕೆ ಬರುವ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ದಿನಾಂಕ 01-04-2025 ರಿಂದ 30-04-2025ರ ತನಕ 30 ದಿನಗಳು ಪ್ರಮುಖ ದುರಸ್ತಿ ಕಾಮಗಾರಿ ನಡೆಯಲಿದೆ.

ಆದ್ದರಿಂದ ಒಂದು ಸೇತುವೆಯಲ್ಲಿ (ಮಂಗಳೂರು ನಗರ-ತಲಪಾಡಿ ಕಡೆಗೆ ಹೋಗುವ) ವಾಹನಗಳ ಸಂಚಾರಕ್ಕಾಗಿ ದ್ವಿಮುಖ ಸಂಚಾರ ವ್ಯವಸ್ಥೆ ಮಾಡಲಾಗಿರುತ್ತದೆ. ಇದರಿಂದ ಪಂಪ್ವೆಲ್ನಿಂದ ತೊಕ್ಕೊಟ್ಟು ತನಕ ಸದರಿ ಹೆದ್ದಾರಿಯ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ ಎಂದು ಪೊಲೀಸರು ಹೇಳಿದ್ದಾರೆ.

ಹಳೆಯ ನೇತ್ರಾವತಿ ಸೇತುವೆಯಲ್ಲಿ ದುರಸ್ತಿ ಕಾಮಗಾರಿ ನಡೆಯುವ ದಿನಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆಗಳಿದ್ದು, ನೇತ್ರಾವತಿ ಸೇತುವೆಯ ಮೂಲಕ ಸಂಚರಿಸುವ ಎಲ್ಲಾ ವಾಹನಗಳ ಚಾಲಕರು, ಸವಾರರು ಮತ್ತು ಸಾರ್ವಜನಿಕರು ಎಚ್ಚರಿಕೆಯಿಂದ ಚಲಿಸಬೇಕು ಹಾಗೂ ಪೀಕ್ ಅವರ್ಗಳಲ್ಲಿ ಸದರಿ ಮಾರ್ಗದಲ್ಲಿ ವಾಹನ ಸಂಚಾರವನ್ನು ತಪ್ಪಿಸಲು ಕೋರಲಾಗಿದೆ.

ಪರ್ಯಾಯ ಮಾರ್ಗಗಳ ವಿವರಗಳು * ಮುಡಿಪು-ಕೊಣಾಜೆ-ದೇರಳಕಟ್ಟೆ ಕಡೆಯಿಂದ ಮಂಗಳೂರು ನಗರ ಕಡೆಗೆ ಲಘು ವಾಹನಗಳು/ ದ್ವಿ-ಚಕ್ರ ವಾಹನಗಳಲ್ಲಿ ಸಂಚರಿಸುವ ಸ್ಥಳೀಯ ವಾಸಿಗಳು ಕೊಣಾಜೆ ಹರೇಕಳ (ಬ್ರಿಡ್ಜ್) ಅಡ್ಯಾರ್ ಮುಖಾಂತರ ಮಂಗಳೂರು ಕಡೆಗೆ ಸಂಚರಿಸಬಹುದಾಗಿದೆ. * ಮಂಗಳೂರು ಕಡೆಯಿಂದ ಕೊಣಾಜೆ-ಮುಡಿಪು-ದೇರಳಕಟ್ಟೆ ಕಡೆಗೆ ಸಂಚರಿಸುವ ಸ್ಥಳೀಯ ದ್ವಿ- ಚಕ್ರ/ ಲಘು ವಾಹನಗಳು ಅಡ್ಯಾರ್-ಹರೇಕಳ (ಬ್ರಿಡ್ಜ್) ಮುಖಾಂತರ ಸಂಚರಿಸುವುದು. * ತಲಪಾಡಿ, ಉಳ್ಳಾಲ ಕಡೆಯಿಂದ ಬೆಂಗಳೂರು-ಉಪ್ಪಿನಂಗಡಿ-ಪುತ್ತೂರು-ಸುಳ್ಯ ಕಡೆಗೆ ಸಂಚರಿಸುವ ವಾಹನಗಳು ತೊಕ್ಕೊಟ್ಟಿನಿಂದ ಬಲಕ್ಕೆ ತಿರುಗಿ ಮುಡಿಪು-ಬೋಳಿಯಾರ್-ಮೆಲ್ಕಾರ್ ಮೂಲಕ ಸಂಚರಿಸುವುದು

* ಬಿ. ಸಿ. ರೋಡ್ ಕಡೆಯಿಂದ ತಲಪಾಡಿ ಮತ್ತು ಕೇರಳ ಕಡೆಗೆ ಸಂಚರಿಸುವ ವಾಹನಗಳು ಮೆಲ್ಕಾರ್-ಮುಡಿಪು-ತೊಕ್ಕೊಟ್ಟು ಮುಖಾಂತರ ಸಂಚರಿಸುವುದು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಳೆಯ ನೇತ್ರಾವತಿ ಸೇತುವೆಯನ್ನು 2016ರಲ್ಲಿಯೂ ದುರಸ್ತಿಗಾಗಿ ಹಲವು ದಿನಗಳ ಕಾಲ ಮುಚ್ಚಲಾಗಿತ್ತು. 2024ರಲ್ಲಿಯೂ ಕೆಲವು ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿತ್ತು. ಈಗ ಮತ್ತೆ ಗುಂಡಿಗಳು ಬಿದ್ದಿದ್ದು, ಒಂದು ತಿಂಗಳ ಕಾಲ ದುರಸ್ತಿ ಕಾರ್ಯವನ್ನು ನಡೆಸುವುದಾಗಿ ಎನ್ಹೆಚ್ಎಐ ಹೇಳಿದೆ.

ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಪ್ರದೇಶದಲ್ಲಿ ರಾತ್ರಿಯ ವೇಳೆ ಕಾಮಗಾರಿ ಕೈಗೊಳ್ಳಬೇಕು. ಈ ಹಿಂದೆ ಸೇತುವೆ ದುರಸ್ತಿ ಸಮಯದಲ್ಲಿ ಬ್ಯಾರಿಕೇಡ್ ಹಾಕಿ ರೋಡ್ ಬಂದ್ ಮಾಡಿದ್ದು, ವಾಹನ ಸವಾರರು ಪರದಾಡಿದ್ದರು. ಈಗ ಮತ್ತೆ ಒಂದು ತಿಂಗಳು ರಸ್ತೆ ಬಂದ್ ಮಾಡಲಾಗುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಎನ್ಹೆಚ್ಎಐ ಕಳೆದ ಬಾರಿ ರಸ್ತೆ ರಿಪೇರಿ ಮಾಡಿದಾಗ ಕಾಮಗಾರಿ ಸರಿಯಾಗಿ ಮಾಡಿರಲಿಲ್ಲ. ರಿಪೇರಿ ಬಳಿಕ ಅಲ್ಲಲ್ಲಿ ಕಬ್ಬಿಣದ ರಾಡ್ಗಳು ಎದ್ದು ಬಂದಿದ್ದವು. ಇವು ಚಕ್ರಗಳಿಗೆ ಸಿಲುಕಿ ವಾಹನಗಳ ಸಂಚಾರಕ್ಕೆ ಸಹ ತೊಂದರೆಯಾಗಿತ್ತು ಎಂದು ಜನರು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *