ಮಂಗಳೂರು-ಬೆಂಗಳೂರು ಹೆದ್ದಾರಿ  ಬಂದ್ : ಮತ್ತೆ ಗುಡ್ಡ ಕುಸಿತ..!

ನೆಲ್ಯಾಡಿ(ದಕ್ಷಿಣ ಕನ್ನಡ): ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಇಂದು ಮತ್ತೆ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು, ಹೆದ್ದಾರಿಯೆಲ್ಲಾ ಮಣ್ಣಿನಿಂದ ಮುಚ್ಚಿಹೋಗಿದೆ. ಇದರಿಂದ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಸಂಚಾರ ಸ್ಥಗಿತವಾಗಿದೆ.

ಈ ಪ್ರದೇಶದಲ್ಲಿ ರಸ್ತೆಯ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಅತ್ಯಂತ ಎತ್ತರದ ಗುಡ್ಡವನ್ನು ಯಾವುದೇ ಮುನ್ನೆಚ್ಚರಿಕೆಯ ಕ್ರಮವಿಲ್ಲದೇ ಕತ್ತರಿಸಲಾಗಿದೆ. ಪರಿಣಾಮವಾಗಿ ಮಳೆ ಬರುತ್ತಿದ್ದಂತೆ ಮಣ್ಣು ಸಡಿಲಗೊಂಡು ಕುಸಿದು ಬೀಳುತ್ತಿದೆ. ಇದೀಗ ಹಲವು ಬಾರಿ ಹೆದ್ದಾರಿ ಬಂದ್ ಆಗುವ ಸ್ಥಿತಿ ನಿರ್ಮಾಣವಾಗಿದೆ.

ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಬದಲಿ ರಸ್ತೆಗಳ ಮೂಲಕ ಸಂಚರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಈ ರಸ್ತೆಯನ್ನು ಅವಲಂಬಿಸಿರುವ ಸಾವಿರಾರು ಪ್ರಯಾಣಿಕರು ಹಾಗೂ ವಾಹನ ಸವಾರರು ಆತಂಕದಲ್ಲಿದ್ದಾರೆ. ನೆಲ್ಯಾಡಿ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸಂಬಂಧಪಟ್ಟವರು ಮಣ್ಣನ್ನು ಯಂತ್ರಗಳ ಮೂಲಕ ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.

ಈ ಮಾರ್ಗದಲ್ಲಿ ನಿರಂತರವಾಗಿ ಅನಾಹುತಗಳು ನಡೆಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಮೌನವಹಿಸಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ. ಕಾಮಗಾರಿ ಗುಣಮಟ್ಟ, ಸುರಕ್ಷತಾ ಕ್ರಮಗಳ ಅವ್ಯವಸ್ಥೆ, ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಕುರಿತು ಸಾರ್ವಜನಿಕರ ಆಕ್ರೋಶ ತೀವ್ರಗೊಂಡಿದೆ. ಇನ್ನಷ್ಟು ಅನಾಹುತಗಳನ್ನು ತಪ್ಪಿಸಲು ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ತಾತ್ಕಾಲಿಕ ಮತ್ತು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬದಲಿ ರಸ್ತೆಯಲ್ಲಿ ಸಂಚರಿಸಿ“ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಂ 75ರ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ, ಗುಡ್ಡ ಕುಸಿದಿದ್ದು ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಈಗಾಗಲೇ ಮಣ್ಣು ತೆಗೆಯುವ ಕಾರ್ಯ ಆರಂಭವಾಗಿದೆ. ಇನ್ನಷ್ಟು ಮಣ್ಣು ಕುಸಿಯುತ್ತಿದ್ದು, ತೆರವು ಕಾರ್ಯ ಮಧ್ಯಾಹ್ನದವರೆಗೆ ನಡೆಯಲಿದೆ. ಹೀಗಾಗಿ, ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳು ಬದಲಿ ರಸ್ತೆಯಲ್ಲಿ ಸಂಚರಿಸಬೇಕು” ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳು ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *