ಮಂಗಳೂರು: ಪ್ರಯಾಣಿಕರ ಬೇಡಿಕೆಗೆ ಅನುಗುಣ ವಾಗಿ ಮಂಗಳೂರು- ಕಾರ್ಕಳ ನಡುವೆ ಡಿ.12ರಿಂದ ಪ್ರಾಯೋಗಿಕವಾಗಿ ಬಸ್ ಸಂಚಾರ ನಡೆಸಲು ಕೆಎಸ್ಸಾರ್ಟಿಸಿ ತೀರ್ಮಾನಿಸಿದೆ.
ರಾಜ್ಯ ಸರಕಾರ ಶಕ್ತಿ ಯೋಜನೆ ಪರಿಚಯಿಸಿದ ಬಳಿಕ ಮಂಗಳೂರಿನಿಂದ ಕಾರ್ಕಳ ನಡುವೆ ಸರಕಾರಿ ಬಸ್ ಓಡಿಸಲು ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಆರ್‌ಟಿಒ, ಕೆಎಸ್ಸಾರ್ಟಿಸಿ ಅಧಿಕಾರಿಗಳ ಜತೆ ವಿಧಾನ ಪರಿಷತ್ ಸದಸ್ಯ ಐವನ್ ಡಿ’ ಸೋಜಾ ಕೆಲವು ದಿನಗಳ ಹಿಂದೆ ಚರ್ಚಿಸಿದ್ದರು.
ಈಗ ಬಸ್ ಸಂಚಾರಕ್ಕೆ ತಾತ್ಕಾಲಿಕ ಪರವಾನಿಗೆ ನೀಡಲು ಆರ್‌ಟಿಒ ಮುಂದಾಗಿದೆ. ನಾಲ್ಕು ತಿಂಗಳ ಅವಧಿಗೆ ತಾತ್ಕಾಲಿಕ ಪರವಾನಿಗೆ ದೊರಕಿದೆ.
ಈ ಬಸ್‌ಗಳು ಮಂಗಳೂರಿನ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ನಂತೂರು, ಗುರುಪುರ, ಕೈಕಂಬ, ಮೂಡುಬಿದಿರೆ ಮೂಲಕ ಕಾರ್ಕಳಕ್ಕೆ ತೆರಳಲಿದೆ. ಮಂಗಳೂರು ಮತ್ತು ಕಾರ್ಕಳದಿಂದ ತಲಾ ಎರಡು ಬಸ್‌ಗಳು ಸಂಚರಿಸಲಿವೆ.
ವೇಳಾಪಟ್ಟಿ ಇನ್ನಷ್ಟೇ ಅಂತಿಮವಾಗಬೇಕಿದೆ ಎನ್ನುತ್ತಾರೆ ಕೆಎಸ್ಸಾರ್ಟಿಸಿ ಅಧಿಕಾರಿಗಳು. ಮಂಗಳೂರು- ಕಾರ್ಕಳ ರೂಟ್‌ಗಳಲ್ಲಿ ಪರವಾನಿಗೆ ನೀಡುವಂತೆ ಕಳೆದ ತಿಂಗಳು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳು ಪ್ರಸ್ತಾವ ಇರಿಸಿದ್ದು,ಇದಕ್ಕೆ ಖಾಸಗಿ ಬಸ್ ಮಾಲಕರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಖಾಸಗಿ ಬಸ್ ಮಾಲಕರು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಬಳಿ 15 ದಿನಗಳ ಗಡುವು ಕೇಳಿದ್ದರು. ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ವಾದ ಮಂಡಿಸಿ, ಮಂಗಳೂರು-ಕಾರ್ಕಳ ಮಧ್ಯೆ 8 ಟ್ರಿಪ್‌ಗ್ಳ ಬೇಡಿಕೆಯಲ್ಲಿ ಕೇವಲ 3 ಟ್ರಿಪ್‌ಗೆ ಈಗಾಗಲೇ ಅವಕಾಶ ನೀಡಲಾಗಿದೆ.
ಕೇಂದ್ರ ಸರಕಾರದ ಏರಿಯಾ ಸ್ಕೀಂ ನಿಯಮ ಪ್ರಕಾರ ಹಾಗೂ ಚಾಪ್ಟರ್ -5ರಂತೆ ಹೊಸ ರೂಟ್‌ಗೆ ಪರವಾನಿಗೆ ನೀಡಲು ಸಾರಿಗೆ ಪ್ರಾಧಿಕಾರಕ್ಕೆ ಅಧಿಕಾರ ಇದೆ ಂದು ವಾದ ಮಂಡಿಸಿದರು.
ಮುಂದಿನ ದಿನಗಳಲ್ಲಿ ಅಗತ್ಯ ಇರುವ ಇತರ ಪ್ರದೇಶಗಳಲ್ಲಿ ಸರಕಾರಿ ಬಸ್ ಸಂಚಾರ ಆರಂಭಿಸಲು ಸರಕಾರ ವನ್ನು ಕೇಳಿಕೊಂಡಿರುವುದಾಗಿ ಸದಸ್ಯ ಐವನ್ ಡಿ’ ಸೋಜಾ ತಿಳಿಸಿದ್ದಾರೆ.