ಮಂಗಳೂರು || ಶ್ರೀಕ್ಷೇತ್ರ ಧರ್ಮಸ್ಥಳ ಬೆನ್ನಿಗೆ ನಿಂತ ಸ್ಪೀಕರ್ U.T. Khader! ಮತ್ತೆ Padmalatha ಕೇಸ್ ಮುನ್ನಲೆಗೆ.

ಮಂಗಳೂರು || ಶ್ರೀಕ್ಷೇತ್ರ ಧರ್ಮಸ್ಥಳ ಬೆನ್ನಿಗೆ ನಿಂತ ಸ್ಪೀಕರ್ U.T. Khader! ಮತ್ತೆ Padmalatha ಕೇಸ್ ಮುನ್ನಲೆಗೆ.

ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತುಹಾಕಿದ ಪ್ರಕರಣವು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ, ಪ್ರಕರಣದ ಸಮಗ್ರ ತನಿಖೆಗಾಗಿ ಸರ್ಕಾರ ವಿಶೇಷ ತನಿಖಾ ತಂಡ ರಚಿಸಿದೆ. ಈ ಕುರಿತಂತೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ತನಿಖೆ ಮೂಲಕ ಸತ್ಯಾಂಶ ಹೊರಬರಲಿ ಎಂಬ ಆಶಯ ವ್ಯಕ್ತಪಡಿಸಿದರು.

“ಯಾವುದು ಸತ್ಯವೋ ಅದು ಬಹಿರಂಗವಾಗಬೇಕು. ಸಮರ್ಪಕ ತನಿಖೆ ಮೂಲಕ ಎಲ್ಲವೂ ತಿಳಿಯುತ್ತದೆ. ಯಾವ ಕಾನೂನು ಕ್ರಮ ಬೇಕೋ ಅದು ಅನುಸರಿಸಲಾಗುತ್ತದೆ. ತನಿಖೆ ನಡೆಯುತ್ತಿರುವಾಗಲೇ ತೀರ್ಪು ನೀಡುವುದು ಸರಿಯಲ್ಲ. ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಬೇಕು. ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಕ್ಕೆ ಕಪ್ಪುಚುಕ್ಕೆ ತರುವ ಕೆಲಸ ಮಾಡಬಾರದು,” ಎಂದು ಸ್ಪೀಕರ್ ತಿಳಿಸಿದರು.

ಮುಂದುವರೆದು ಮಾತನಾಡಿ “ಹಣ, ಶ್ರಮ, ನಂಬಿಕೆಯ ಮೂಲಕ ಸಂಸ್ಥೆ ನಿರ್ಮಾಣವಾಗುತ್ತದೆ. ಅದರಿಂದ ಅನೇಕ ಜನರಿಗೆ ಇವತ್ತು ಉಪಯೋಗವಾಗುತ್ತಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಸತ್ಯಾಂಶ ಹೊರಬಂದು ಕಾನೂನು ಕ್ರಮ ಕೈಗೊಳ್ಳಬೇಕು. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಬೇಕಾಗಿದೆ,” ಎಂದು ಹೇಳಿದರು.

39 ವರ್ಷಗಳ ಹಿಂದಿನ ಪದ್ಮಲತಾ ಹತ್ಯೆ ಪ್ರಕರಣ ಮತ್ತೆ ಮುನ್ನಲೆಗೆ ಇತ್ತೀಚಿನ ಶವ ಹೂತುಹಾಕಿದ ಪ್ರಕರಣದ ಬೆನ್ನಲ್ಲೇ, ಧರ್ಮಸ್ಥಳದಲ್ಲಿ ನಡೆದ 39 ವರ್ಷದ ಹಿಂದಿನ ಪದ್ಮಲತಾ ಹತ್ಯೆ ಪ್ರಕರಣ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದ್ದು, ನ್ಯಾಯಕ್ಕಾಗಿ ಪ್ರತಿಭಟನೆಗಳು ಜೋರಾಗುತ್ತಿವೆ.

ಪದ್ಮಲತಾ ನಾಪತ್ತೆ ಮತ್ತು ಹತ್ಯೆ ಪತ್ತೆ:

1986ರ ಡಿಸೆಂಬರ್ 22ರಂದು, ಧರ್ಮಸ್ಥಳದ ಬೋಳಿಯಾರು ಗ್ರಾಮದ ಪದ್ಮಲತಾ ಉಜಿರೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ನಾಪತ್ತೆಯಾದರು. 56 ದಿನಗಳ ಶೋಧನೆ ಬಳಿಕ, ನೇತ್ರಾವತಿ ನದಿಯಲ್ಲಿ ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಮೃತದೇಹ ಅಸ್ಥಿಪಂಜರದ ರೂಪದಲ್ಲಿ ಪತ್ತೆಯಾಯಿತು. ಸಾಕಷ್ಟು ಹೋರಾಟಗಳ ಬಳಿಕ ಸಿಐಡಿ ತನಿಖೆ ನಡೆಸಿದರೂ ಯಾವುದೇ ಆರೋಪಿಗಳ ಪತ್ತೆಯಾಗದ ಕಾರಣ, ಪ್ರಕರಣವನ್ನು ಮುಚ್ಚಿ ಹಾಕಲಾಯ್ತು. ಪದ್ಮಲತಾ, ಧರ್ಮಸ್ಥಳದ ಪ್ರಭಾವಿ ಕಮ್ಯೂನಿಸ್ಟ್ ಮುಖಂಡರ ಮಗಳಾಗಿದ್ದರು. ಅತ್ಯಾ*ಚಾರ ನಡೆಸಿ ಕೊಲೆ ಮಾಡಿರಬಹುದೆಂಬ ಅನುಮಾನಗಳ ನಡುವೆ, ಇದೀಗ ಈ ಹಳೆಯ ಪ್ರಕರಣ ಮತ್ತೆ ಬೆಳಕಿಗೆ ಬಂದಿದೆ.

ಪದ್ಮಲತಾದ ಸಹೋದರಿ ಚಂದ್ರಾವತಿ ನ್ಯಾಯಕ್ಕೆ ಒತ್ತಾಯ

ಪದ್ಮಲತಾ ಸಹೋದರಿ ಚಂದ್ರಾವತಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಮಾತನಾಡುತ್ತಾ, “ನಮ್ಮ ಸಹೋದರಿಯ ಹತ್ಯೆಗೆ ಈವರೆಗೆ ನ್ಯಾಯ ಸಿಕ್ಕಿಲ್ಲ. ಇತ್ತೀಚಿನ ಪ್ರಕರಣದ ನಡುವೆ, ನಮ್ಮ ಸಹೋದರಿಯ ಪ್ರಕರಣವನ್ನೂ ಎಸ್ಐಟಿ ತನಿಖೆಗೆ ಒಳಪಡಿಸಬೇಕು,” ಎಂದು ಒತ್ತಾಯಿಸಿದರು.

ಧರ್ಮಸ್ಥಳದ ಶವ ಹೂತುಹಾಕಿದ ಪ್ರಕರಣವನ್ನು ನಿಖರವಾಗಿ ತನಿಖೆ ಮಾಡಲು ರಾಜ್ಯ ಸರ್ಕಾರದಿಂದ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಈಗ ಪದ್ಮಲತಾ ಹತ್ಯೆ ಪ್ರಕರಣವನ್ನೂ ಈ ತಂಡ ತನಿಖೆಗೆ ತೆಗೆದುಕೊಳ್ಳುತ್ತದೆಯಾ ಎಂಬ ಕುತೂಹಲ ಜನರಲ್ಲಿ ಮೂಡಿದೆ.

Leave a Reply

Your email address will not be published. Required fields are marked *