ಮಡಿಕೇರಿ: ಕರ್ನಾಟಕ ದಕ್ಷಿಣ ಒಳನಾಡಿನಲ್ಲಿ ವ್ಯಾಪಕ ಮಳೆ ಮುಂದುವರೆದಿದ್ದು, ಕಾವೇರಿ ಕೊಳ್ಳದಲ್ಲಿ ಸುರಿಯುತ್ತಿರುವ ಭಾರಿ ಮಳೆ ರಾಜ್ಯದ ಜಲಾಶಯಗಳ ಒಳಹರಿವಿನ ಮಟ್ಟ ಹೆಚ್ಚಾಗುವಂತೆ ಮಾಡಿದೆ.
ಕೊಡಗಿನ ವಿವಿಧೆಡೆ ಗುರುವಾರ ಬೆಳಗ್ಗೆ ಧಾರಾಕಾರ ಮಳೆ ಸುರಿದಿದ್ದು, ಈ ಭಾಗದ ಎಲ್ಲಾ ಜಲಾನಯನ ಪ್ರದೇಶಗಳಲ್ಲಿ ಒಳಹರಿವು ಗಣನೀಯವಾಗಿ ಹೆಚ್ಚಾಗುತ್ತಿದೆ.
ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತಿರುವ ಪರಿಣಾಮ ಹಾರಂಗಿ ಅಣೆಕಟ್ಟಿನ ಒಳಹರಿವು ಕೂಡ ಹೆಚ್ಚಾಗ ತೊಡಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಗುರುವಾರ ಬೆಳಗಿನ ಜಾವದವರೆಗಿನ 24 ಗಂಟೆಗಳಲ್ಲಿ 160.07 ಮಿ.ಮೀ ಮಳೆಯಾಗಿದ್ದು, ಇದು ದಾಖಲೆಯಾಗಿದೆ.
ಇನ್ನು ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ನಗರ ವ್ಯಾಪ್ತಿಯಲ್ಲಿ, ತ್ಯಾಗರಾಜನಗರದಲ್ಲಿ ಸಣ್ಣ ಭೂಕುಸಿತ ದಾಖಲಾಗಿದ್ದು, ಕೆಲವು ಮನೆಗಳ ಕಾಂಪೌಂಡ್ ಗೋಡೆಗಳಿಗೆ ಹಾನಿಯಾಗಿದೆ. ಮಳೆಯ ಹಿನ್ನೆಲೆಯಲ್ಲಿ ಮೂರ್ನಾಡು ಬಳಿಯ ಬೇತ್ರಿ ಎಂಬಲ್ಲಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಭಾರೀ ಮಳೆ ಮುಂದುವರಿದರೆ ಸೇತುವೆಗೆ ನೀರು ನುಗ್ಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಕುಶಾಲನಗರದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ನಾಪೋಕ್ಲು ಸಮೀಪದ ಯೆಮ್ಮೆಮಾಡುವಿನಲ್ಲಿ ಅಲ್ಪ ಭೂಕುಸಿತ ಸಂಭವಿಸಿದೆ.