ಮಂಗಳೂರು: ಮಂಗಳೂರು-ಮಡಗಾಂವ್ ನಡುವೆ ಸಂಚಾರ ನಡೆಸುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಕೇರಳ ತನಕ ವಿಸ್ತರಣೆ ಮಾಡಲಾಗುತ್ತದೆಯೇ?. ಅಕ್ಟೋಬರ್‌ನಲ್ಲಿ ಈ ಕುರಿತು ಬೇಡಿಕೆ ಬಂದಿದ್ದು, ಸದ್ಯ ರೈಲ್ವೆ ಇಲಾಖೆಯ ಒಪ್ಪಿಗೆಗೆ ಕಾಯಲಾಗುತ್ತಿದೆ. ಪ್ರಸ್ತುತ ಕೇರಳದಲ್ಲಿ ಎರಡು ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಮಂಗಳೂರು-ಮಡಗಾಂವ್ ರೈಲು ಪ್ರಯಾಣಿಕರ ಕೊರತೆಯನ್ನು ಎದುರಿಸುತ್ತಿದೆ ಎಂದು ಸಹ ವರದಿಗಳಿವೆ.
ಮಂಗಳೂರು-ಮಡಗಾಂವ್ ನಡುವಿನ ವಂದೇ ಭಾರತ್ ರೈಲನ್ನು ಕೇರಳದ ಕೊಝಿಕ್ಕೋಡ್ ತನಕ ವಿಸ್ತರಣೆ ಮಾಡಬೇಕು ಎಂಬುದು ಪ್ರಸ್ತಾವನೆಯಾಗಿದೆ. ಇದರಿಂದಾಗಿ ಕೇರಳ ರಾಜ್ಯದ ಜನರಿಗೂ ಅನುಕೂಲವಾಗಲಿದೆ. ರೈಲು ಎದುರಿಸುತ್ತಿರುವ ಪ್ರಯಾಣಿಕರ ಕೊರತೆಯೂ ಸಹ ನಿವಾರಣೆಯಾಗಲಿದೆ ಎಂಬುದು ವಾದವಾಗಿದೆ
ಕೇರಳದ ಕೋಝಿಕ್ಕೋಡ್ ಕ್ಷೇತ್ರದ ಕಾಂಗ್ರೆಸ್ ಸಂಸದ ಎಂ. ಕೆ. ರಾಘವನ್ ವಂದೇ ಭಾರತ್ ರೈಲನ್ನು ವಿಸ್ತರಣೆ ಮಾಡುವ ಕುರಿತು ಆಸಕ್ತಿ ಹೊಂದಿದ್ದು, ಈ ಕುರಿತು ಮಾತುಕತೆಯನ್ನು ಆರಂಭಿಸಿದ್ದಾರೆ. ಈ ಕುರಿತು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಜೊತೆ ಅವರು ಮಾತುಕತೆಯನ್ನು ಸಹ ನಡೆಸಿದ್ದಾರೆ.
ರೈಲ್ವೆ ಇಲಾಖೆ ಒಪ್ಪಿಗೆ ಬಾಕಿ ಇದೆ: ಪ್ರಸ್ತುತ ಕೇರಳದಲ್ಲಿ ಎರಡು ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ವಾರದ ದಿನಗಳಲ್ಲಿಯೇ ಪ್ರಯಾಣಿಕರ ಕೊರತೆಯನ್ನು ಎದುರಿಸುತ್ತಿದೆ. ಈಗ ರೈಲನ್ನು ಕೋಝಿಕ್ಕೋಡ್ ತನಕ ವಿಸ್ತರಣೆ ಮಾಡಿದರೆ ಕೇರಳ ಭಾಗದ ಜನರು ಗೋವಾಕ್ಕೆ ಪ್ರಯಾಣಿಸಲು ಸಹಾಯಕವಾಗಲಿದೆ. ಪ್ರಯಾಣಿಕರ ಕೊರತೆಯೂ ರೈಲಿಗೆ ಇರುವುದಿಲ್ಲ ಎಂದು ರೈಲ್ವೆ ಸಚಿವರಿಗೆ ವಿವರಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ. ಕೆ. ಕೃಷ್ಣದಾಸ್ ಸಹ ಈ ಕುರಿತು ಮಾತನಾಡಿದ್ದು ರೈಲ್ವೆ ಸಚಿವರು ಮಡಗಾಂವ್-ಮಂಗಳೂರು ವಂದೇ ಭಾರತ್ ರೈಲು ಕೋಝಿಕ್ಕೋಡ್ ತನಕ ವಿಸ್ತರಣೆ ಮಾಡಲು ಆಸಕ್ತಿ ಹೊಂದಿದ್ದಾರೆ. ಈ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಕೋಝಿಕ್ಕೋಡ್ ತನಕ ವಿಸ್ತರಣೆ ಮಾಡಿದರೆ ರೈಲಿನ ಪ್ರಯಾಣದ ಅವಧಿ ಇನ್ನೂ 2.05 ಗಂಟೆ ಹೆಚ್ಚಾಗಲಿದೆ. ಅಲ್ಲದೇ ಹೊಸ ನಿಲ್ದಾಣಗಳನ್ನು ರೈಲಿಗೆ ನೀಡಬೇಕಾಗುತ್ತದೆ. ರೈಲು ಸೇವೆ ವಿಸ್ತರಣೆ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡ ಬಳಿಕ ಈ ಬಗ್ಗೆ ಇಲಾಖೆ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.