ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪದ ಕುಡುಪು ಎಂಬಲ್ಲಿ ಕ್ರಿಕೆಟ್ ಪಂದ್ಯದ ವೇಳೆ ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಘೋಷಣೆ ಕೇಳಿ ಬಂದಿದೆ. ಈ ವೇಳೆ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗ್ತಿದೆ. ಗುಂಪೊಂದು ಯುವಕನ ಮೇಲೆ ಹಲ್ಲೆಗೈದ ಪರಿಣಾಮ ಆತ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಈ ಘಟನೆಯಲ್ಲಿ ಹತ್ಯೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಕೇರಳದ ವಯಾನಾಡಿನ ಮನವಂತವಾಡಿಯ ಪುಲ್ಪಲ್ಲಿ ನಿವಾಸಿಯಾದ ಮಹಮ್ಮದ್ ಅಶ್ರಫ್ ಹತ್ಯೆಗೆ ಒಳಗಾದ ವ್ಯಕ್ತಿ ಎನ್ನಲಾಗ್ತಿದೆ. ಈ ಕೇಸ್ ಸಂಬಂಧ 20 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
20 ಮಂದಿ ಅರೆಸ್ಟ್
ಮಹಮ್ಮದ್ ಅಶ್ರಫ್ ಅವರ ಮೃತದೇಹವನ್ನು ಸಂಬಂಧಿಕರು ಗುರುತಿಸಿದ್ದು, ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಸಂಬಂಧಿಕರು ಮೃತದೇಹವನ್ನು ರಾತ್ರಿಯೇ ಕೊಂಡು ಹೋಗಿದ್ದಾರೆ. ಪ್ರಕರಣ ಸಂಬಂಧ ಈವರೆಗೆ 20 ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಎಪ್ರಿಲ್ 27ರ ಭಾನುವಾರ ನಡೆದಿದ್ದು, ಪೊಲೀಸರು ಈ ಸಂಬಂಧ 20 ಮಂದಿಯನ್ನು ಬಂಧಿಸಿದ್ದಾರೆ. ಪಾಕಿಸ್ಥಾನದ ಪರ ಜೈಕಾರ ಕೂಗಿದ ಕಾರಣಕ್ಕೆ ಗುಂಪಿನಿಂದ ಹಲ್ಲೆ ನಡೆದಿದೆ ಎನ್ನಲಾಗ್ತಿದೆ. ಕುಡುಪು ಬಳಿ ನಡೆದ ಕ್ರಿಕೆಟ್ ಮ್ಯಾಚ್ ಟೂರ್ನಮೆಂಟ್ ಸ್ಥಳಕ್ಕೆ ಮಹಮ್ಮದ್ ಅಶ್ರಫ್ ಹೋದಾಗ ಈ ದುರ್ಘಟನೆ ಸಂಭವಿಸಿದೆ.
ಮಂಗಳೂರಿಗೆ ವಲಸೆ ಕಾರ್ಮಿಕನಾಗಿ ಬಂದಿದ್ದ ಅಶ್ರಫ್, ಕ್ರಿಕೆಟ್ ನಡೆಯುತ್ತಿದ್ದ ಸ್ಥಳದಲ್ಲಿ ಪಾಕ್ ಪರ ಘೋಷಣೆ ಮಾಡಿದ ಆರೋಪಕ್ಕೆ ಒಳಗಾಗಿದ್ದಾರೆ. ಈ ಕಾರಣಕ್ಕಾಗಿ ಕ್ರಿಕೆಟ್ ಆಡುತ್ತಿದ್ದ ಯುವಕರಿಂದ ಮಹಮ್ಮದ್ ಅಶ್ರಫ್ ಮೇಲೆ ಹಲ್ಲೆ ನಡೆದಿದೆ. ದೇಹದ ಸೂಕ್ಷ್ಮ ಭಾಗಗಳಿಗೆ ಮಾರಣಾಂತಿಕ ಹೊಡೆತದಿಂದ ಅಶ್ರಫ್ ಮೃತಪಟ್ಟಿದ್ದಾರೆ.
ಸದ್ಯ ಈ ಕೃತ್ಯದಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ಭಾಗವಹಿಸಿರುವ ಸಂಶಯವಿದೆ. ಈಗಾಗಲೇ 20 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆಮಾಡಿ ಬಂಧಿಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣದಲ್ಲಿ ಮಾಜಿ ಕಾರ್ಪೊರೇಟರ್ ಪತಿಯ ಹೆಸರು ಕೂಡಾ ಥಳಕು ಹಾಕಿಕೊಂಡಿದೆ. ಈ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




