‘ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ’: ನಟಿ ರಮ್ಯಾ

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​ ತೂಗುದೀಪ ಅವರಿಗೆ ಜಾಮೀನು ಮಂಜೂರು ಮಾಡಿರುವ ಹೈಕೋರ್ಟ್​ ಆದೇಶ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂಕೋರ್ಟ್​ ತೀರ್ಪನ್ನು ಕಾಯ್ದಿರಿಸಿದೆ.

ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲ ಮತ್ತು ನ್ಯಾಯಮೂರ್ತಿ ಆರ್​.ಮಹಾದೇವನ್​ ಅವರಿದ್ದ ನ್ಯಾಯಪೀಠ, ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ. ಅಲ್ಲದೇ, ಮುಂದಿನ ಒಂದು ವಾರದಲ್ಲಿ ಪ್ರಕರಣ ಸಂಬಂಧ ಆರೋಪಿಗಳ ಪರ ವಕೀಲರಿಗೆ ಲಿಖಿತ ಹೇಳಿಕೆಗಳನ್ನು ದಾಖಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಅಲ್ಲದೆ, ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡಿರುವ ಹೈಕೋರ್ಟ್​ನ ಆದೇಶ ಆರೋಪಿಗಳನ್ನು ಖುಲಾಸೆಗೊಳಿಸುವ ಆದೇಶವಾಗಿದೆ ಎಂದು ಅನಿಸುತ್ತಿಲ್ಲವೇ? ಹೈಕೋರ್ಟ್ ಎಲ್ಲಾ ಜಾಮೀನು ಅರ್ಜಿಗಳ ಮೇಲೆ ಇದೇ ರೀತಿಯ ಆದೇಶವನ್ನು ಕೊಡುತ್ತದೆಯೇ? ಎಂದು ಸುಪ್ರೀಂಕೋರ್ಟ್​ ಪ್ರಶ್ನಿಸಿದೆ.

ಹೈಕೋರ್ಟ್​ನ ವಿಧಾನ ನಮಗೆ ತೊಂದರೆಯಾಗುತ್ತಿದೆ. ಸೆಷನ್ಸ್ ಕೋರ್ಟ್ ಇಂತಹ ತಪ್ಪು ಮಾಡಿದರೆ ನಾವು ಅರ್ಥ ಮಾಡಿಕೊಳ್ಳಬಹುದು. ಆದರೆ ಹೈಕೋರ್ಟ್ ನ್ಯಾಯಮೂರ್ತಿಗಳ ಆದೇಶ ವಿವೇಚನ ರಹಿತವಾಗಿದೆ. ಇದನ್ನು ನಾವು ಪರಿಶೀಲಿಸುತ್ತಿದ್ದೇವೆ. ಹೈಕೋರ್ಟ್ ನ್ಯಾಯಾಂಗೀಯವಾಗಿ ತನ್ನ ವಿವೇಚನೆಯನ್ನು ಬಳಸಿದೆಯೇ? ಎಂಬುದು ಕಳವಳಕಾರಿ ವಿಷಯ ಎಂದು ಸರ್ವೋಚ್ಚ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

ರಮ್ಯಾ ಪ್ರತಿಕ್ರಿಯೆ: ಇದರ ಬೆನ್ನಲೇ, ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಸ್ಯಾಂಡಲ್​ವುಡ್ ಕ್ವೀನ್ ಖ್ಯಾತಿಯ ರಮ್ಯಾ, ಮೃತ ರೇಣುಕಾಸ್ವಾಮಿ ಸಾವಿಗೆ ನ್ಯಾಯ ಸಿಗಲಿದೆ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್​ ಮೂಲಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಟಿ ರಮ್ಯಾ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ”ಭಾರತದ ಸಾಮಾನ್ಯ ಜನರಿಗೆ ಸುಪ್ರೀಂ ಕೋರ್ಟ್ ಆಶಾಕಿರಣ – ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ” ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *