ಬೆಂಗಳೂರು: ‘ನಮ್ಮ ಮೆಟ್ರೊ’ ಹಳದಿ ಮಾರ್ಗಕ್ಕೆ ಮುಂದಿನ ತಿಂಗಳು ಒಂದು, ಜನವರಿಯಲ್ಲಿಇನ್ನೊಂದು ರೈಲು ಸೇರ್ಪಡೆಯಾಗಲಿದ್ದು, ಈ ಮೂಲಕ ಒಟ್ಟು ಮೂರು ರೈಲುಗಳೊಂದಿಗೆ ಜನವರಿ ಅಂತ್ಯಕ್ಕೆ ವಾಣಿಜ್ಯ ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಆರ್ ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದೆ. ಎಲೆಕ್ಟ್ರಾನಿಕ್ ಸಿಟಿಯ ಐಟಿ ಹಬ್‌ಗಳಿಗೆ ಸುಲಭ ಸಂಪರ್ಕ ಸಾಧ್ಯವಾಗಲಿದೆ. ಅಲ್ಲದೆ ಎಲೆಕ್ಟ್ರಾನಿಕ್ ಸಿಟಿಯ ಟ್ರಾಫಿಕ್ ನಿಂದ ಸಾಮಾನ್ಯ ಜನರ ಓಡಾಟಕ್ಕೂ ಮೆಟ್ರೋ ಆರಾಮದಾಯಕವಾಗಲಿದೆ.
ಈ ಮಾರ್ಗದ ಸಿವಿಲ್, ಎಲೆಕ್ಟ್ರಿಕಲ್, ಸಿಗ್ನಲಿಂಗ್ ಸೇರಿದಂತೆ ಎಲ್ಲಾ ಕೆಲಸಗಳು ಮುಗಿದ್ದು, ಬೋಗಿಗಳ ಕೊರತೆಯಿಂದ ವಾಣಿಜ್ಯ ಸಂಚಾರ ಆರಂಭವಾಗಿಲ್ಲ. ಈ ಮಾರ್ಗಕ್ಕೆ ಬೇಕಾದ ರೈಲುಗಳನ್ನು ಪೂರೈಸಬೇಕಿದ್ದ ಟಿಟಾಗರ್ ವ್ಯಾಗನ್ಸ್ ಸಂಸ್ಥೆಯ ವಿಳಂಬದಿಂದ ರೈಲುಗಳು ಇನ್ನೂ ನಮ್ಮ ಮೆಟ್ರೊಗೆ ಬಂದಿಲ್ಲ. ಟಿಟಾಗರ್ ಸಂಸ್ಥೆ ಮುಂದಿನ ತಿಂಗಳು ಆರು ಬೋಗಿಗಳ ಒಂದು ಸೆಟ್, ಜನವರಿಯಲ್ಲಿಇನ್ನೊಂದು ಸೆಟ್ (18 ಬೋಗಿ) ಅನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.