ಮಿಲ್ಕ್ಶೇಕ್ ಮತ್ತು ಫ್ರೂಟ್ ಜ್ಯೂಸ್ ( ಹಣ್ಣಿನ ರಸ ) ಈ ಎರಡರಲ್ಲಿ ಒಂದನ್ನು ಆಯ್ಕೆಮಾಡುವಾಗ ಅನೇಕ ಜನರು ಗೊಂದಲಕ್ಕೆ ಒಳಗಾಗುತ್ತಾರೆ. ಆದರೆ, ಎರಡೂ ಆಯ್ಕೆಗಳು ಬಹಳಷ್ಟು ರುಚಿ ಮತ್ತು ಪೋಷಕಾಂಶಗಳನ್ನು ಹೊಂದಿರುತ್ತವೆ. ವಾಸ್ತವವಾಗಿ, ಮಿಲ್ಕ್ಶೇಕ್ ಮತ್ತು ಫ್ರೂಟ್ ಜ್ಯೂಸ್ ಎರಡನ್ನೂ ಮಿತವಾಗಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು.
ಮಿಲ್ಕ್ಶೇಕ್, ಕ್ಯಾಲ್ಸಿಯಂ ಮತ್ತು ಪ್ರೊಟೀನ್ಗಳನ್ನು ಒದಗಿಸಿದರೆ, ಫ್ರೂಟ್ ಜ್ಯೂಸ್, ವಿಟಮಿನ್ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ. ಅಂತಿಮವಾಗಿ, ಎರಡರ ನಡುವಿನ ಆಯ್ಕೆಯು ನಿಮ್ಮ ವೈಯಕ್ತಿಕ ಆದ್ಯತೆಗಳು ಮತ್ತು ಆಹಾರದ ಅಗತ್ಯಗಳನ್ನು ಅವಲಂಬಿಸಿರುತ್ತದೆ. ಆದರೆ, ನಿಮ್ಮ ಆರೋಗ್ಯಕ್ಕೆ ನಿಜವಾಗಿಯೂ ಯಾವುದು ಒಳ್ಳೆಯದು? ಅವುಗಳ ಪ್ರಯೋಜನಗಳು ಏನು ಎಂಬುದನ್ನು ನಾವೀಗ ನೋಡೋಣ.
ಮಿಲ್ಕ್ಶೇಕ್ ಮತ್ತು ಫ್ರೂಟ್ ಜ್ಯೂಸ್ ತಮ್ಮದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಮಿಲ್ಸ್ಶೇಕ್ಗಳು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಬಲವಾದ ಮೂಳೆಗಳು ಮತ್ತು ಹಲ್ಲುಗಳಿಗೆ ಇದು ಅತ್ಯಗತ್ಯ. ಇದು ಗಮನಾರ್ಹ ಪ್ರಮಾಣದ ಪ್ರೋಟೀನ್ ಸಹ ಒದಗಿಸುತ್ತದೆ. ಇದು ಸ್ನಾಯುಗಳ ಬೆಳವಣಿಗೆ ಮತ್ತು ದುರಸ್ತಿಗೆ ಸಹಾಯ ಮಾಡುತ್ತದೆ. ಮತ್ತೊಂದೆಡೆ ಫ್ರೂಟ್ ಜ್ಯೂಸ್, ವಿಟಮಿನ್ಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಫ್ರೂಟ್ ಜ್ಯೂಸ್ ತ್ವರಿತ ಶಕ್ತಿ ವರ್ಧಕವಾಗಿದೆ.
ಮಿಲ್ಕ್ಶೇಕ್ಗಳನ್ನು ಸಾಮಾನ್ಯವಾಗಿ ಹಾಲು, ಐಸ್ ಕ್ರೀಮ್, ಚಾಕೊಲೇಟ್ ಅಥವಾ ವೆನಿಲ್ಲಾದಂತಹ ವಿವಿಧ ರುಚಿಯೊಂದಿಗೆ ತಯಾರಿಸಲಾಗುತ್ತದೆ. ಕಡಿಮೆ ಕೊಬ್ಬಿನ ಹಾಲು ಮತ್ತು ತಾಜಾ ಹಣ್ಣುಗಳೊಂದಿಗೆ ತಯಾರಿಸಿದರೆ ಆ ಮಿಲ್ಕ್ಶೇಕ್ ಉತ್ತಮವಾಗಿರುತ್ತದೆ. ಇದು ಪೌಷ್ಟಿಕಾಂಶದ ಆಯ್ಕೆಯಾಗಿದೆ. ಡಯೆಟ್ ಮಾಡುವವರಿಗೆ ಹೆಚ್ಚುವರಿ ಪೋಷಕಾಂಶಗಳನ್ನು ಒದಗಿಸಲು ಮಿಲ್ಕ್ ಶೇಕ್ ಉತ್ತಮ ಮಾರ್ಗವಾಗಿದೆ.
ಹಣ್ಣುಗಳಿಂದ ದ್ರವವನ್ನು ಹೊರತೆಗೆಯುವ ಮೂಲಕ ಫ್ರೂಟ್ ಜ್ಯೂಸ್ ತಯಾರಿಸಲಾಗುತ್ತದೆ. ತಾಜಾ ಅಥವಾ ಪ್ಯಾಕೇಜ್ ಆಗಿರಬಹುದು. ಸಂಪೂರ್ಣ ಹಣ್ಣನ್ನು ತಿನ್ನದೆ ವಿಟಮಿನ್ಗಳು ಮತ್ತು ಖನಿಜಗಳ ಪ್ರಮಾಣವನ್ನು ಪಡೆಯಲು ಅನುಕೂಲಕರ ಮಾರ್ಗವಾಗಿದೆ. ಆದಾಗ್ಯೂ, ಸಂಪೂರ್ಣ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಸಕ್ಕರೆಯನ್ನು ಸೇರಿಸದ ಶೇ. 100% ಫ್ರೂಟ್ ಜ್ಯೂಸ್ ಆಯ್ಕೆ ಮಾಡುವುದು ಮುಖ್ಯವಾಗಿದೆ.