ಮಂಗಳೂರು: ಮೂರು ದಿನಗಳ ಹಿಂದೆ ಆರಂಭವಾದ ಮುಂಗಾರು ಮಳೆ ಕರ್ನಾಟಕದ ಕರಾವಳಿ ಭಾಗದಲ್ಲಿ ಅಬ್ಬರಿಸುತ್ತಿದ್ದು, ಮಂಗಳೂರು ಸೇರಿದಂತೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.

ಮಳೆಯಿಂದ ನಗರದ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಅಡ್ಡಿಯುಂಟಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದೇ ರಸ್ತೆಗಳಲ್ಲೇ ನೀರು ಸಂಗ್ರಹವಾಗಿದೆ. ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಿಂದ ಕೆಲವೆಡೆ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿತವೂ ಸಂಭವಿಸಿದೆ.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಮುಂದಿನ ಎರಡು ದಿನಗಳ ಕಾಲ ಮಂಗಳೂರು ಸೇರಿದಂತೆ ಕರ್ನಾಟಕದ ಕರಾವಳಿಯಲ್ಲಿ ಮಳೆ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ರವಾಸಿಗರೂ ಕಷ್ಟ ಅನುಭವಿಸುತ್ತಿದ್ದಾರೆ. ಕರಾವಳಿ ಪ್ರದೇಶದ ಸೌಂದರ್ಯ ಸವಿಯಲು ಬಂದವರು ರಸ್ತೆ ಸಂಚಾರದ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ.
ಅಂಗನವಾಡಿಗಳಿಗೆ ರಜೆ: ಧಾರಾಕಾರ ವರ್ಷಧಾರೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಇಂದು (ಸೋಮವಾರ) ರಜೆ ಘೋಷಿಸಲಾಗಿದೆ ಎಂದು ದ.ಕ. ಪ್ರಭಾರ ಜಿಲ್ಲಾಧಿಕಾರಿ ಆನಂದ್ ಕೆ. ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಳೆ ವಿವರ: ಸುಳ್ಯ ಬೆಳ್ಳಾರೆ: 200.5 ಮಿ.ಮೀ, ಬಂಟ್ವಾಳ ಸರಪಾಡಿ: 190 ಮಿ.ಮೀ, ಪುತ್ತೂರು ಬೆಳಂದೂರು: 190 ಮಿ.ಮೀ, ಪುತ್ತೂರು ಅಲಂಕಾರು: 178.5 ಮಿ.ಮೀ, ಪುತ್ತೂರು ರಾಮಕುಂಜ: 172.5 ಮಿ.ಮೀ, ಪುತ್ತೂರು ಬಡಗನ್ನೂರು: 167.5 ಮಿ.ಮೀ, ಬಂಟ್ವಾಳ ಪುಣಚ: 166 ಮಿ.ಮೀ, ಸುಳ್ಯ ಗುತ್ತಿಗಾರು: 165.5 ಮಿ.ಮೀ, ಪುತ್ತೂರು ಅರಿಯಡ್ಕ: 164 ಮಿ.ಮೀ, ಬಂಟ್ವಾಳ ಕಾವಳಮೂಡೂರು: 163 ಮಿ.ಮೀ, ಬೆಳ್ತಂಗಡಿ ಮಾಲವಂತಿಗೆ: 161.5 ಮಿ.ಮೀ, ಬಂಟ್ವಾಳ ಕೇಪು: 158.5 ಮಿ.ಮೀ, ಬೆಳ್ತಂಗಡಿ ಬಾರ್ಯ: 155 ಮಿ.ಮೀ, ಪಡುಮರ್ನಾಡ್: 151.5 ಮಿ.ಮೀ, ಶಿರಾಡಿ: 151.5 ಮಿ.ಮೀ
ಎನ್ಡಿಆರ್ಎಫ್ – ಎಸ್ಡಿಆರ್ಎಫ್ ತಂಡ ಆಗಮನ: ದಕ್ಷಿಣ ಕನ್ನಡ ಜಿಲ್ಲಾದ್ಯಂತ ವ್ಯಾಪಕ ಮಳೆ ಆಗುತ್ತಿರುವುದರಿಂದ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಆಗಮಿಸಲಿವೆ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ.ಕೆ.ಆನಂದ್ ತಿಳಿಸಿದ್ದಾರೆ. ಭಾನುವಾರ ಜಿಲ್ಲೆಯ ಮಳೆ ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಆನ್ಲೈನ್ ಸಭೆ ನಡೆಸಿ ಅವರು ಮಾತನಾಡಿದರು.
ರಾಷ್ಟ್ರೀಯ ವಿಪತ್ತು ದಳದ (ಎನ್ಡಿಆರ್ಎಫ್) ಒಂದು ತಂಡ ಆಗಮಿಸಲಿದ್ದು, ಅದನ್ನು ಪುತ್ತೂರಿನಲ್ಲಿ ನಿಯೋಜಿಲಾಗುವುದು. ರಾಜ್ಯ ವಿಪತ್ತು ದಳದ (ಎಸ್ಡಿಆರ್ಎಫ್) ಎರಡು ತಂಡಗಳು ಮಂಗಳೂರು ಹಾಗೂ ಸುಬ್ರಹ್ಮಣ್ಯದಲ್ಲಿ ಕಾರ್ಯಾಚರಣೆಯಲ್ಲಿರಲಿವೆ. ಈಗಾಗಲೇ ಒಂದು ಎಸ್ಡಿಆರ್ಎಫ್ ತಂಡ ಆಗಮಿಸಿದೆ ಎಂದು ತಿಳಿಸಿದ್ದಾರೆ.
ವಿಪತ್ತು ನಿರ್ವಹಣೆಗೆ ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಮತ್ತು ಗ್ರಾ.ಪಂ. ಪಿಡಿಒಗಳು ತಮ್ಮ ವ್ಯಾಪ್ತಿಯಲ್ಲಿ ಕಟ್ಟೆಚ್ಚರದಿಂದ ಇರಬೇಕು. ಯಾವುದೇ ಪ್ರಾಕೃತಿಕ ದುರಂತ ಸಂಭವಿಸಿದರೆ ತಕ್ಷಣವೇ ಸ್ಪಂದಿಸಬೇಕು. ಜೀವಹಾನಿ ತಪ್ಪಿಸಲು ಆದ್ಯತೆ ನೀಡಬೇಕು. ತಾಲೂಕು ಆಡಳಿತದೊಂದಿಗೆ ಸಮನ್ವಯದಿಂದ ಕಾರ್ಯಾಚರಿಸಿ, ದುರಂತದ ತೀವ್ರತೆ ತಗ್ಗಿಸಬೇಕು. ಮೆಸ್ಕಾಂ, ಅರಣ್ಯ ಸೇರಿದಂತೆ ಸಂಬಂಧಿಸಿದ ಯಾವುದೇ ಇಲಾಖೆಗಳು ತ್ವರಿತವಾಗಿ ಸ್ಪಂದಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
5 ದಿನ ರೆಡ್ ಅಲರ್ಟ್: ಹವಾಮಾನ ಇಲಾಖೆಯು 5 ದಿನ ರೆಡ್ ಅಲರ್ಟ್ ಘೋಷಿಸಿದೆ. ಈ ಹಿಂದೆ ದುರ್ಘಟನೆ ಸಂಭವಿಸಿದ ಸ್ಥಳಗಳಲ್ಲಿ ಎಚ್ಚರಿಕೆಯಿಂದ ಇರಬೇಕು. ಜೆಸಿಬಿ, ಬೋಟ್ಗಳನ್ನು ಸಿದ್ಧವಾಗಿಡಬೇಕು. ಶಾಲೆಗಳು ಶುರುವಾಗುವ ಮುನ್ನವೇ ಶಿಥಿಲಗೊಂಡಿರುವ ಅಂಗನವಾಡಿ ಮತ್ತು ಶಾಲಾ ಕೊಠಡಿಗಳನ್ನು ತೆರವುಗೊಳಿಸಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಸೂಚಿಸಿದರು.