ಮುಡಾ ಪ್ರಕರಣ: ಮನವಿ ಪತ್ರದಲ್ಲಿ ವೈಟ್ನರ್ ಹಾಕಿದ್ದನ್ನ ಒಪ್ಪಿಕೊಂಡ ಸಿಎಂ ಪತ್ನಿ ಪಾರ್ವತಿ

ಪತ್ನಿ ಪಾರ್ವತಿ ಅವರೊಂದಿಗೆ ಸಿಎಂ ಸಿದ್ದರಾಮಯ್ಯ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತರಿಂದ ಮೂರು ಗಂಟೆಗಳ ಕಾಲ ವಿಚಾರಣೆಗೊಳಗಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪ್ರಾಧಿಕಾರಕ್ಕೆ ಸಲ್ಲಿಸಿದ ಮನವಿ ಪತ್ರಕ್ಕೆ ವೈಟ್ನರ್ ಹಾಕಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಶನಿವಾರ ತಿಳಿಸಿವೆ.

ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮೊದಲ ಆರೋಪಿಯಾಗಿದ್ದು, ಅವರ ಪತ್ನಿ ಎರಡನೇ ಆರೋಪಿಯಾಗಿದ್ದಾರೆ. ಪಾರ್ವತಿ ಅವರು ಶುಕ್ರವಾರ ಮೈಸೂರು ಲೋಕಾಯುಕ್ತ ಎಸ್ ಪಿ ಟಿ.ಜೆ. ಉದೇಶ ಅವರ ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದಾರೆ. ಸಿಎಂ ಪತ್ನಿಯ ಹೇಳಿಕೆ ವಿಡಿಯೋ ಕ್ಯಾಮರಾದಲ್ಲಿ ದಾಖಲಾಗಿದೆ.

ತನಿಖೆ ವೇಳೆ ಪರಿಹಾರದ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಮುಡಾಕ್ಕೆ ಸಲ್ಲಿಸಿದ್ದ ಮನವಿ ಪತ್ರಕ್ಕೆ ವೈಟ್ನರ್ ಹಾಕಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ. ವಾಕ್ಯದಲ್ಲಿ ತಪ್ಪಿದ್ದ ಕಾರಣಕ್ಕೆ ವೈಟ್ನರ್ ಬಳಸಬೇಕಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ. ತಪ್ಪು ಏನು ಎಂದು ತನಗೆ ನಿಖರವಾಗಿ ನೆನಪಿಲ್ಲ ಎಂದು ಅವರು ಹೇಳಿದ್ದಾರೆ ಎನ್ನಲಾಗಿದೆ. ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ನಿವೇಶನಗಳನ್ನು ಮಂಜೂರು ಮಾಡುವಂತೆ ಬೇಡಿಕೆ ಇಟ್ಟಿರುವುದನ್ನು ಮರೆಮಾಚಲು ಮುಡಾ ಪ್ರಕರಣ ಬೆಳಕಿಗೆ ಬಂದ ನಂತರ ಮನವಿ ಪತ್ರಕ್ಕೆ ವೈಟ್ನರ್ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಕೆಸರೆ ಗ್ರಾಮದ 3.16 ಎಕರೆ ವಿವಾದಿತ ಆಸ್ತಿ ಹಾಗೂ ಪರಿಹಾರವಾಗಿ 14 ನಿವೇಶನಗಳನ್ನು ವಿಜಯನಗರದಲ್ಲಿ ಮಂಜೂರು ಮಾಡುವಂತೆ ಪತ್ರ ಬರೆದಿರುವ ಬಗ್ಗೆ ಸಿಎಂ ಪತ್ನಿಯನ್ನು ಪ್ರಶ್ನಿಸಲಾಗಿದೆ. ಅಪರೂಪಕ್ಕೆ ದಾಖಲೆಗಳಿಗೆ ಸಹಿ ಹಾಕುವುದರಿಂದಾಗಿ ಸಹಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ ಎಂದು ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಪಾರ್ವತಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಗುರುವಾರ ಸಂಜೆ ನೋಟಿಸ್ ನೀಡಲಾಗಿತ್ತು. ಕುಟುಂಬದ ಸ್ನೇಹಿತರ ಜತೆಗೂಡಿ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದರು. ಪರಿಹಾರಕ್ಕಾಗಿ ಮುಡಾಕ್ಕೆ ಎಷ್ಟು ಮನವಿ ಪತ್ರಗಳನ್ನು ಸಲ್ಲಿಸಿದ್ದೀರಿ ಎಂಬ ಬಗ್ಗೆಯೂ ಪಾರ್ವತಿ ಅವರನ್ನು ಕೇಳಲಾಯಿತು. ಐದರಿಂದ ಆರು ಪತ್ರಗಳನ್ನು ನೀಡಲಾಗಿದೆ ಮತ್ತು ನಿಖರವಾದ ಸಂಖ್ಯೆಗಳು ತಿಳಿದಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *