ಮೈಸೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಬಿಲ್ಡರ್ ಮನೆ ಹಾಗೂ ಕೆಲ ಆಫೀಸ್ಗಳ ಮೇಲೆ ಮೈಸೂರಿನಲ್ಲಿ ದಾಳಿ ಮುಂದುವರೆದಿದೆ. ಮಹತ್ವದ ದಾಖಲೆಗಳಿಗಾಗಿ ಇಡಿ ಬಲೆ ಬೀಸಿದೆ.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೋಮವಾರ ಬೆಂಗಳೂರು, ಮೈಸೂರು ಸೇರಿದಂತೆ ಹಲವು ಕಡೆ ಏಕ ಕಾಲಕ್ಕೆ ದಾಳಿ ನಡೆಸಿದೆ. ಸೋಮವಾರ ಬೆಳಗ್ಗೆ ೮ ಗಂಟೆಗೆ ಐದು ಜನ ಇಡಿ ಅಧಿಕಾರಿಗಳ ತಂಡ ಮೈಸೂರು ನಗರದ ಇನ್ಕಲ್ ನಲ್ಲಿರುವ ರಾಕೇಶ್ ಪಾಪಣ್ಣ ಹಾಗೂ ಅವರ ತಂದೆ ಪಾಪಣ್ಣ ಅವರನ್ನ ತನಿಖೆಗೆ ಒಳಪಡಿಸಿ, ಇಂದೂ ಕೂಡಾ ಕೆಲವು ದಾಖಲೆಗಳನ್ನ ಪರಿಶೀಲನೆ ನಡೆಸಿತು.
ಮೈಸೂರಿನಲ್ಲಿ ಮತ್ತೊಬ್ಬ ಬಿಲ್ಡರ್ ಮನೆ ಮೇಲೆ ಇಡಿ ದಾಳಿ : ಮುಡಾ ಹಗರಣದ ತನಿಖೆಯಲ್ಲಿ ಹಣಕಾಸಿನ ವಹಿವಾಟಿನ ಬಗ್ಗೆ ಮಾಹಿತಿ ಪಡೆದು, ಇಲ್ಲಿ ನಡೆದಿರುವ ಅವ್ಯವಹಾರಗಳ ತನಿಖೆಗೆ ಇಳಿದಿರುವ ಇಡಿ, ನಿನ್ನೆ ರಾತ್ರಿ ೧೧ ಗಂಟೆಗೆ ಮೈಸೂರಿನ ನ್ಯೂ ಕಾಂತ್ ರಾಜ್ ಅರಸ್ ರಸ್ತೆಯಲ್ಲಿರುವ ಜಯರಾಮು ಎಂಬುವವರಿಗೆ ಸೇರಿದ ಕಚೇರಿ ಹಾಗೂ ಅವರ ಶ್ರೀರಾಂಪುರದಲ್ಲಿರುವ ಮನೆಯ ಮೇಲೆ ದಾಳಿ ಮುಂದುವರೆಸಿದೆ.
ಸೋಮವಾರ ರಾತ್ರಿ ೧೧ ಗಂಟೆಯಿಂದ ಮಂಗಳವಾರ ಬೆಳಗಿನ ಜಾವ ೩ ಗಂಟೆವರೆಗೆ ದಾಖಲೆಗಳನ್ನ ಪರಿಶೀಲನೆ ನಡೆಸಿ ಮತ್ತೆ ಇಂದು ಬೆಳಗ್ಗೆ ಅವರ ಕಚೇರಿಯಲ್ಲಿ ಶೋಧ ಮುಂದುವರೆಸಿದ್ದಾರೆ.
ಹಲವು ಬಿಲ್ಡರ್ಗಳ ಕಚೇರಿ ಮೇಲೆ ದಾಳಿ ಸಾಧ್ಯತೆ : ಮೈಸೂರಿನ ಹಲವು ಬಿಲ್ಡರ್?ಗಳು, ಮಧ್ಯವರ್ತಿಗಳು, ರಾಜಕಾರಣಿಗಳ ಆಪ್ತರ ಬಗ್ಗೆ ಇಡಿಗೆ ಮುಡಾ ದಾಳಿಯ ಸಂದರ್ಭದಲ್ಲಿ ಪ್ರಮುಖ ದಾಖಲೆಗಳು ದೊರೆತಿವೆ ಎನ್ನಲಾಗಿದ್ದು, ಇದರ ಆಧಾರದ ಮೇಲೆ ಇಡಿ ಅಧಿಕಾರಿಗಳು ಮೈಸೂರಿನಲ್ಲಿ ತನಿಖೆ ಮುಂದುವರೆಸಿದ್ದು, ಇನ್ನೂ ಹಲವು ಬಿಲ್ಡರ್ ಕಚೇರಿಗಳು ಹಾಗೂ ಮನೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ.