ಮೈಸೂರು: ಮುಡಾ ಪ್ರಕರಣದ ವಿಚಾರಣೆಗೆ ಲೋಕಾಯುಕ್ತ ಅಧಿಕಾರಿಗಳು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಅವರಿಂದು ಮೈಸೂರಿನ ಲೋಕಾಯುಕ್ತ ಪೊಲೀಸರ ಕಚೇರಿಗೆ ಆಗಮಿಸಿದರು.
ಬೆಂಗಳೂರಿನಿಂದ ಮೈಸೂರಿಗೆ ರಸ್ತೆ ಮೂಲಕ ಚನ್ನಪಟ್ಟಣ ಮಾರ್ಗವಾಗಿ ಆಗಮಿಸಿದ ಸಿದ್ದರಾಮಯ್ಯ ಉಪಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಸರ್ಕಾರಿ ವಾಹನ ಬಿಟ್ಟು ಖಾಸಗಿ ಕಾರಿನಲ್ಲೇ ಬಂದರು. ಅತಿಥಿ ಗೃಹದಿಂದ ಒಂದೇ ಕಾರಿನಲ್ಲಿ ನೇರವಾಗಿ ಲೋಕಾಯುಕ್ತ ಕಚೇರಿಗೆ 10.9ಕ್ಕೆ ತಲುಪಿದರು.
ಸಿದ್ದರಾಮಯ್ಯ ಅವರನ್ನು ಮೈಸೂರು ಲೋಕಾಯುಕ್ತ ಎಸ್.ಪಿ.ಉದ್ದೇಶ್ ವಿಚಾರಣೆ ನಡೆಸಲಿದ್ದು, ವಿಚಾರಣೆಯ ವಿಡಿಯೋ ರೆಕಾರ್ಡ್ ಮಾಡುವ ಬಗ್ಗೆ ಮೂಲಗಳು ಖಚಿತಪಡಿಸಿವೆ. 12 ಗಂಟೆಯವರೆಗೆ ಲೋಕಾಯುಕ್ತ ವಿಚಾರಣೆಯಲ್ಲಿ ಭಾಗವಹಿಸುವ ಸಿದ್ದರಾಮಯ್ಯ, ಬಳಿಕ ಚನ್ನಪಟ್ಟಣ ಉಪಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ.
50:50ರ ಅನುಪಾತದಲ್ಲಿ ತಮ್ಮ ಪತ್ನಿಯ ಹೆಸರಿನಲ್ಲಿ ಮುಡಾದಲ್ಲಿ 14 ನಿವೇಶನ ಪಡೆದ ಆರೋಪ ಎದುರಿಸುತ್ತಿರುವ ಸಿಎಂ, ಈ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದಾರೆ. ಈಗಾಗಲೇ ಪ್ರಕರಣದಲ್ಲಿ ಎರಡನೇ ಆರೋಪಿಯಾದ ಪತ್ನಿ ಪಾರ್ವತಿ ಸಿದ್ದರಾಮಯ್ಯ, ಮೂರನೇ ಆರೋಪಿ ಇವರ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾಲೀಕ ದೇವರಾಜ್ ಅವರ ವಿಚಾರಣೆ ಮುಕ್ತಾಯವಾಗಿದೆ.
ಮುಖ್ಯಮಂತ್ರಿ ಮೈಸೂರು ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ.ಉದ್ದೇಶ್ ತನಿಖೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಮೊದಲೇ ಪೂರ್ಣಗೊಳಿಸಿದ್ದರು.
ಸಿಎಂ ಸಿದ್ದರಾಮಯ್ಯ ಮೈಸೂರು ಲೋಕಾಯುಕ್ತ ಕಚೇರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರ್ ಸಿಮಾ ಲಾಟ್ಕರ್ ಹಾಗೂ ಡಿಸಿಪಿಗಳಾದ ಮುತ್ತುರಾಜ್ ಹಾಗೂ ಜಾಹ್ನವಿ ನೇತೃತ್ವದಲ್ಲಿ ನಗರದ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿ ಇರುವ ಲೋಕಾಯುಕ್ತ ಕಚೇರಿ ಬಳಿ ಬಂದೋಬಸ್ತ್ ಬಗ್ಗೆ ಮಂಗಳವಾರ ಪರಿಶೀಲನೆ ನಡೆಸಿದ್ದರು.