ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ಜೊತೆಗೆ ಮುಳ್ಳಯ್ಯನಗಿರಿ ಮತ್ತು ಚಂದ್ರದ್ರೋಣ ಪರ್ವತದ ಶ್ರೇಣಿಗಳನ್ನು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಅಪಾಯಕಾರಿ ವಲಯಗಳ ಪಟ್ಟಿಗೆ ಸೇರಿಸಿದೆ.
ಇತ್ತೀಚೆಗೆ, ಚಿಕ್ಕಮಗಳೂರು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಕಾರಣಗಳನ್ನು ಗುರುತಿಸಲು ಜಿಎಸ್ಐ ಸಮೀಕ್ಷೆ ನಡೆಸಿತು. ಈ ಸಂಬಂಧ ಮುಂಜಾಗ್ರತಾ ಕ್ರಮಕ್ಕೆ ಶಿಫಾರಸು ಮಾಡಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿದೆ.
ಕೇರಳದ ವಯನಾಡ್ ಪ್ರದೇಶದಲ್ಲಿ ಸಂಭವಿಸಿದ ದುರಂತದ ನಂತರ, ರಾಜ್ಯ ಸರ್ಕಾರವು ಭೂಕುಸಿತ ಮತ್ತು ಪ್ರವಾಹದಂತಹ ನೈಸರ್ಗಿಕ ವಿಕೋಪಗಳಿಗೆ ಒಳಗಾಗುವ ಪ್ರದೇಶಗಳ ಪಟ್ಟಿಯನ್ನು ಸಂಗ್ರಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಅದರಂತೆ ಜಿಲ್ಲಾಡಳಿತ 77 ಅನಾಹುತ ಪೀಡಿತ ಸ್ಥಳಗಳನ್ನು ಗುರುತಿಸಿ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಆಗಸ್ಟ್‌ನಲ್ಲಿ ಜಿಎಸ್‌ಐ ತಂಡವು ಮುಳ್ಳಯ್ಯನಗಿರಿ, ದತ್ತ ಪೀಠ ಮತ್ತು ಚಂದ್ರದ್ರೋಣ ಬೆಟ್ಟ ಶ್ರೇಣಿಗಳಿಗೆ ಭೇಟಿ ನೀಡಿ, ಭೂಕುಸಿತ ಮತ್ತು ಪ್ರವಾಹದ ಕಾರಣಗಳನ್ನು ಅಧ್ಯಯನ ಮಾಡಿತು. ಪರಿಸರ ಸೂಕ್ಷ್ಮ ಪ್ರದೇಶದಲ್ಲಿ “ಬುದ್ಧಿಹೀನ ಮತ್ತು ಅವೈಜ್ಞಾನಿಕ” ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು ಭೂಕುಸಿತಕ್ಕೆ ಕಾರಣವೆಂದು ವರದಿ ಹೇಳಿದೆ. ಮುಳ್ಳಯ್ಯನಗಿರಿ ಮತ್ತು ಚಂದ್ರದ್ರೋಣ ವ್ಯಾಪ್ತಿಯಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಹ ನಿಷೇಧಿಸಬೇಕು ಎಂದು ಸೂಚಿಸಿದೆ.