ಮುನಿರತ್ನ ಮೂರು ತಿಂಗಳ ಹಿಂದೆಯೇ ಅರೆಸ್ಟ್ ಆಗಬೇಕಿತ್ತು, ಯಾಕೆ?

ಮುನಿರತ್ನ ನಾಯ್ಡು ಜಾಮೀನು ವಿಚಾರಣೆ ಏನಾಯ್ತು ?

ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಕೇಸ್ನಿಂದ ರಿಲೀಫ್ ಪಡೆದಿದ್ದ ಬಿಜೆಪಿ ಶಾಸಕ ಮುನಿರತ್ನ ಸದ್ಯ ಮಹಿಳೆ ಮೇಲಿನ ಅತ್ಯಾಚಾರ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಆದರೆ ಮೂರು ತಿಂಗಳ ಹಿಂದೆಯೇ ಮುನಿರತ್ನ ಜೈಲು ಸೇರಬೇಕಿತ್ತು ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಮೂರು ತಿಂಗಳ ಹಿಂದೆಯೇ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿತ್ತು ಎನ್ನಲಾಗಿದೆ. ಮಹಿಳೆ ಮೂರು ತಿಂಗಳ ಮೊದಲೇ ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದ್ದರು ಎಂಬ ಸುದ್ದಿ ಹೊರಬಿದ್ದಿದೆ.

ಜೂನ್ ತಿಂಗಳಲ್ಲೇ ಮಹಿಳೆ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಮುನಿರತ್ನ ವಿರುದ್ಧ ರೇಪ್ ಸಂಬಂಧ ದೂರು ನೀಡಿದ್ದರು. ಆದರೆ, ಪೊಲೀಸರು ಇದನ್ನು ಒಂದು ಅರ್ಜಿಯಂತೆ ಸ್ವೀಕರಿಸಿ, ಇದಕ್ಕೆ ಸಂಬಂಧಿಸಿ ಸಾಕ್ಷಿಗಳನ್ನು ನೀಡುವಂತೆ ಕೇಳಿದ್ದರು.

ಅಲ್ಲದೆ ಮಹಿಳೆಗೆ ನೋಟಿಸ್ ಕೂಡ ನೀಡಿ ವಿಚಾರಣೆಗೆ ಕರೆಯಲಾಗಿತ್ತು. ಆದರೆ, ಮಹಿಳೆ ಪೊಲೀಸರ ಎದುರು ಬಂದಿರಲಿಲ್ಲ. ಈ ಕಾರಣದಿಂದ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಬಳಿಕ ಇತ್ತೀಚೆಗೆ ಅದೇ ಮಹಿಳೆ ಕಗ್ಗಲೀಪುರ ಪೊಲೀಸ್ ಠಾಣೆಗೆ ಮತ್ತೊಮ್ಮೆ ದೂರು ನೀಡಿದ ಬಳಿಕ ಮುನಿರತ್ನ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಒಂದು ವೇಳೆ ಮೂರು ತಿಂಗಳ ಹಿಂದೆ ಮಹಿಳೆ ದೂರು ನೀಡಿದಾಗ ಎಫ್ಐಆರ್ ದಾಖಲಿಸಿದ್ದರೆ, ಮುನಿರತ್ನ ಅವರು ಮೊದಲೇ ಅರೆಸ್ಟ್ ಆಗುತ್ತಿದ್ದರು ಎನ್ನಲಾಗಿದೆ. ಅತ್ಯಾಚಾರ ಕೇಸ್ನಲ್ಲಿ ಸದ್ಯ ಎಸ್ಐಟಿ ಕಸ್ಟಡಿಯಲ್ಲಿರುವ ಶಾಸಕ ಮುನಿರತ್ನ, ತನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು ಎಂದು ಹೇಳುತ್ತಲೇ ಇದ್ದಾರೆ.

ಏನಿದು ಪ್ರಕರಣ?: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಜಾತಿ ನಿಂದನೆ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿಬಂದಿತ್ತು. ಈ ಕೇಸ್ ಸಂಬಂಧ ಅವರ ಬಂಧನವೂ ಆಗಿತ್ತು. ಇದರಲ್ಲಿ ಜಾಮೀನು ಪಡೆದು ಹೊರಬರುತ್ತಿದ್ದ ಹೊತ್ತಲ್ಲೇ ಮತ್ತೊಂದೆಡೆ ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ಅತ್ಯಾಚಾರ ಕೇಸ್ ದಾಖಲಿಸಿದ್ದರು. ಈ ಸಂಬಂಧ ರಾಮನಗರ ಪೊಲೀಸರು ಕೂಡ ಮುನಿರತ್ನ ಅವರನ್ನು ವಶಕ್ಕೆ ಪಡೆದಿದ್ದರು.

ಪರಪ್ಪನ ಅಗ್ರಹಾರ ಜೈಲಿನಿಂದ ಮುನಿರತ್ನ ಅವರನ್ನು ಕಗ್ಗಲೀಪುರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ಕೂಡ ಮಾಡಲಾಗಿತ್ತು. ಇನ್ನು ಮುನಿರತ್ನ ಅವರು ಎಚ್ಐವಿ ಪಾಸಿಟಿವ್ ಸಂತ್ರಸ್ತೆಯನ್ನು ಹನಿಟ್ರ್ಯಾಪ್ಗೆ ಬಳಸಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಲಾಗಿದ್ದು, ಸಂತ್ರಸ್ತ ಮಹಿಳೆಯೊಬ್ಬರು ಮುನಿರತ್ನ ವಿರುದ್ಧ ಅತ್ಯಾಚಾರದ ಕೇಸ್ ದಾಖಲಿಸಿದ್ದರು.

ಮಹಿಳೆ ದೂರಿನಲ್ಲಿ ಹೇಳಿರುವಂತೆ ಖಾಸಗಿ ರೆಸಾರ್ಟ್ನಲ್ಲಿ ಆಕೆಯ ವಿರುದ್ಧ ಅತ್ಯಾಚಾರ ನಡೆದಿರುವುದಾಗಿ ಡಿವೈಎಸ್ಪಿ ದಿನಕರ್ ಶೆಟ್ಟಿ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದರು. ʼಕೋವಿಡ್ ಸಂದರ್ಭದಲ್ಲಿ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಾಗಿತ್ತು. ವಿಡಿಯೋ ಕಾಲ್ ಮಾಡಿ ನನ್ನೊಂದಿಗೆ ಮಾತನಾಡುತ್ತಿದ್ದರು. ಬಳಿಕ ನನ್ನನ್ನು ನಗ್ನವಾಗಿ ಇರುವಂತೆ ಕರೆ ಮಾಡಿ ಒತ್ತಾಯಿಸುತ್ತಿದ್ದರು. ನಾನು ಅದಕ್ಕೆ ಒಪ್ಪಿರಲಿಲ್ಲ ಎಂದಿದ್ದರು.

ʼನನ್ನನ್ನು ಒಂದು ಸ್ಥಳಕ್ಕೆ ಬರಲು ಹೇಳಿದ್ದರು. ಅಲ್ಲಿ ನನ್ನನ್ನು ತಬ್ಬಿಕೊಳ್ಳಲು ಮುಂದಾದಾಗ ವಿರೋಧ ಮಾಡಿದ್ದೆ. ಅದಕ್ಕೆ, ಅವರು ಇದೆಲ್ಲ ರಾಜಕೀಯದಲ್ಲಿ ಕಾಮನ್ ಎಂದು ಹೇಳಿದ್ದರು. ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿ, ಯಾರಿಗೂ ಹೇಳದಂತೆ ಬೆದರಿಸಿದ್ದರು. ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ನನ್ನ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದರು.

Leave a Reply

Your email address will not be published. Required fields are marked *