ವರದಿ : ಲೋಕೇಶ್ ಗುಬ್ಬಿ
ನಗರ ಜೀವನವನ್ನು ಬಿಟ್ಟು ಗ್ರಾಮೀಣ ಪ್ರದೇಶಕ್ಕೆ ಬಂದು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸುವ ನಿಟ್ಟಿನಲ್ಲಿ ಅಣಬೆ ಬೇಸಾಯ ಮತ್ತು ಸಾವಯವ ಕೃಷಿ ಮಾಡುತ್ತಿರುವ ಪ್ರಗತಿ ಪರ ರೈತ ಮಹಿಳೆ ಗಂಗಾಲಕ್ಷ್ಮಿ ಕೆ.ಎಲ್.ಇವರ ಯಶೋಗಾಥೆ.
ಬೆಂಗಳೂರು ನಗರದಲ್ಲಿ ಟ್ಯಾಕ್ಸಿ ಇಟ್ಟು ಕೊಂಡು ಜೀವನ ನಡೆಸುವ ಸಂದರ್ಭದಲ್ಲಿ ಟ್ಯಾಕ್ಸಿಯಲ್ಲಿ ನಷ್ಟ ಉಂಟಾದ್ದರಿಂದ ಗಂಡ ಹೆಂಡತಿ ಕುಟುಂಬ ಸಮೇತ ಮರಳಿ ಗೂಡಿಗೆ ಎಂಬಂತೆ ಸ್ವಂತ ಹಳ್ಳಿಯಾದ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿ, ಅರಳೇಕಟ್ಟೆ ಲಂಬಾಣಿ ತಾಂಡ್ಯ ಗ್ರಾಮಕ್ಕೆ ಬಂದು ಸಾವಯವ ಕೃಷಿ ಮಾಡಲು ಮುಂದಾಗಿದ್ದಾರೆ. ಇವರು ಬೆಂಗಳೂರಿನಲ್ಲಿರುವಾಗ ಜೈಮಾರುತಿ ಮಶ್ರೂಮ್ ಸೆಂಟರ್ ನಲ್ಲಿ ತರಬೇತಿ ಪಡೆದಿದ್ದರಿಂದ ಸ್ವಂತ ಗ್ರಾಮದಲ್ಲಿ ಅಣಬೆ ಕೃಷಿ ಪ್ರಾರಂಭ ಮಾಡಲು ಸಹಾಯವಾಗಿದೆ ಎಂದು ಹೇಳುತ್ತಾರೆ.
ಅಣಬೆ ಬೆಸಾಯ : ಕೃಷಿ ವಿಧಾನ ಒಂದೊಂದು ಇಂಚಿನಷ್ಟು ಅಳೆತೆಯ ನೆಲ್ಲು (ಭತ್ತದ) ಹುಲ್ಲನ್ನು ಕತ್ತರಿಸಿಕೊಂಡು, ಫಾರ್ಮಾಲಿನ್ ಹಾಗೂ ಕಾರ್ಬನ್ ಡೈಜಿನ್ ಮಿಶ್ರಿತ ನೀರಿನಲ್ಲಿ ಕನಿಷ್ಠ 12 ಗಂಟೆಯವರೆಗೆ ನೆನೆಸಿರುತ್ತಾರೆ. ಸ್ವಲ್ಪ ತೇವಾಂಶ ಇರುವಂತೆ 18 ರಿಂದ 20 ಇಂಚಿನಷ್ಟು ಉದ್ದದ ಪಾಲಿಥಿನ್ ಕವರಿನ ಚೀಲಗಳಲ್ಲಿ ಒಂದು ಇಂಚು ಹುಲ್ಲಿಗೆ ಅಣಬೆ ಬೀಜಗಳನ್ನು ಹಾಕಲಾಗುತ್ತದೆ. ಅದೇ ರೀತಿ ಪ್ರತಿ ಚೀಲಗಳಲ್ಲಿಯೂ 3- 4 ಲೇಯರ್ ಗಳನ್ನು ಹಾಕಲಾಗುತ್ತದೆ. ದಿನಂಪ್ರತಿ ಮೂರು ಬಾರಿಯಂತೆ ನೀರನ್ನು ಸಿಂಪಡಿಸಬೇಕಾಗುತ್ತದೆ ಇದಾಗಿ ನಾಲ್ಕೈದು ದಿನಕ್ಕೆ ಅಣಬೆ ಕಟಾವಿಗೆ ಸಿದ್ದವಾಗುತ್ತದೆ. ಪ್ರಾರಂಭದಲ್ಲಿ ಮಾತ್ರ ಒಂದು ತಿಂಗಳಷ್ಟು ಸಮಯ ತೆಗೆದುಕೊಳ್ಳುತ್ತದೆ, ಆದರೂ ತಿಂಗಳಿಗೆ ಮೂರು ಬಾರಿ ಫಸಲು ದೊರೆಯುತ್ತದೆ.
ಮನೆಯ ಪಕ್ಕದಲ್ಲಿ ಒಂದು ಶೆಡ್ ಮಾಡಿ ಅದರಲ್ಲಿ ಪ್ರತಿದಿನ 5 ಕೆಜಿ ಅಣಬೆಯನ್ನು ಬೆಳೆಯುತ್ತೇನೆ. ಅಣಬೆಗೆ ಪ್ರತಿನಿತ್ಯ ಮನೆಯ ಹತ್ತಿರ ಅಕ್ಕಪಕ್ಕದ ಗ್ರಾಮಸ್ಥರು ಬಂದು ಅಣಬೆಯನ್ನು ಖರೀದಿಸುತ್ತಾರೆ. ಒಂದು ಕೆಜಿ ಅಣಬೆಯನ್ನ ರೂ 250 ಕ್ಕೆ ಮಾರಾಟ ಮಾಡುತ್ತಾರೆ.
ಲಾಭದ ಲೆಕ್ಕಾಚಾರ: ಪಾಲಿಥೀನ್ ಬ್ಯಾಗ್ ಸಿದ್ಧಪಡಿಸುವುದು, ಹುಲ್ಲು ಕತ್ತರಿಸಿ ನೆನೆಸಿಡುವುದು, ಒಣಗಿಸಿ ಬೀಜ ಬಿತ್ತುವುದು, ನೀರು ಸಿಂಪಡಣೆ ಮುಂತಾದ ಸಣ್ಣ ಸಣ್ಣ ಕೆಲಸಗಳಿಗಾಗಿ ತಿಂಗಳಿಗೆ ಸುಮಾರು 5 ರಿಂದ 6 ಸಾವಿರಗಳಷ್ಟು ಖರ್ಚು ಬರುತ್ತದೆ. ದಿನಕ್ಕೆ ನಾಲ್ಕುರಿಂದ ಆರು ಕಿಲೋಗಳಷ್ಟು ಆಯಿಸ್ಟರ್ ಅಣಬೆಯನ್ನು ಉತ್ಪಾದಿಸುತ್ತಿದ್ದು, ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗೆ ೨೫೦ ರಿಂದ ರೂ. ದರ ಇದೆ. ಒಟ್ಟಾರೆ ತಿಂಗಳಿಗೆ ಸುಮಾರು 15,000 ರೂ.ಗಳಷ್ಟು ಖರ್ಚಾಗುತ್ತದೆ. ತಿಂಗಳಿಗೆ 22,500 ರೂ ಲಾಭ ಸಿಗುತ್ತದೆ ಎಂದು ಗಂಗಾಲಕ್ಷ್ಮಿ ಹೇಳುತ್ತಾರೆ.
ತರಬೇತಿ: ತರಬೇತಿ ಬೇಕು ಎಂದು ನಮ್ಮ ಶೆಡ್ ಹತ್ತಿರ ಕೇಳಿಕೊಂಡು ಬಂದವರಿಗೆ ನಾನು ತರಬೇತಯನ್ನು ನೀಡುತ್ತಿದ್ದೇನೆ. ಕೊನೇಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಅಣಬೆ ತರಬೇತಿಯಲ್ಲಿ ಭಾಗವಹಿಸಿ ತರಬೇತಯನ್ನು ನೀಡಿರುತ್ತಾರೆ.
ನಾಟಿ ಕೋಳಿ ಸಾಕಾಣಿಕೆ: ಬಯಲಿನಲ್ಲಿ 50 ನಾಟಿ ಕೋಳಿಗಳನ್ನು ಹಾಕಿರುತ್ತಾರೆ. ನಾಟಿ ಕೋಳಿಗಳು ಮನೆಯ ಅಕ್ಕ ಪಕ್ಕ ಇರುವ ಮರದ ಮೇಲೆ ರಾತ್ರಿ ಸಮಯದಲ್ಲಿ ಕುಳಿತು ಕೊಳ್ಳುತ್ತವೆ. ಮೊಟ್ಟೆ ಇಡುವ ಸಮಯದಲ್ಲಿ ಮನೆಯ ಹತ್ತಿರ ಮಂಕರಿ( ತಟ್ಟಿ)ಯಲ್ಲಿ ಇಟ್ಟು ಹೋಗುತ್ತವೆ. ನಾಟಿ ಕೋಳಿ ಮೊಟ್ಟೆಗೆ ಹೆಚ್ಚು ಬೇಡಿಕೆ ಇರುವುದರಿಂದ ಕೆಲವರು ಪೋನ್ ಮಾಡಿ ನನ್ನಗೆ ನಾಟಿ ಕೋಳಿ ಮೊಟ್ಟೆ ಬೇಕು ಎಂದು ಮುಂಚೆಯೇ ಆರ್ಡರ್ ಮಾಡುತ್ತಾರೆ.
ಕುರಿಸಾಕಣಿಕೆ: ಕೃಷಿ ಕುರಿ ಸಾಕಾಣಿಕೆಗಾಗಿ ಶೆಡ್ ಮಾಡಿ ಕುರಿ ಹಾಗೂ ಮೇಕೆಯನ್ನುಸಾಕಿದ್ದಾರೆ. ಹಾವುಗಳಿಂದ ಬರುವ ಇಕ್ಕಿಯನ್ನು ಸ್ವಂತ ಜಮೀನಿಗೆ ಬಳಸಿ ರಾಸಾಯನಿಕ ಮುಕ್ತ ಕೃಷಿ ಮಾಡಲು ಮುಂದಾಗಿದ್ದೇನೆ ಎಂದು ಹೇಳುತ್ತಾರೆ.
ತೋಟಗಾರಿಕಾ ಬೆಳೆಗಳಾದ ಅಡಿಕೆ ತೆಂಗು ಇವುಗಳ ಜೊತೆಯಲ್ಲಿ ಹಣ್ಣಿನ ಗಿಡಗಳಾದ ಪಪಾಯ, ಲಿಚ್ಚಿ ಹನುಮಫಲ ಸೀಬೆ, ಇನ್ನು ಮುಂತಾದ ಹಣ್ಣಿನ ಗಿಡಗಳನ್ನು ಮನೆಯ ಉಪಯೋಗಕ್ಕೆ ಬೆಳೆಸಿದ್ದಾರೆ. ಮತ್ತು ಅರಣ್ಯ ಸಸಿಗಳಾದ ಸಿಲ್ವರ್ಒಕ್ , ಸಾರ್ವೆ, ತೇಗ ಇವುಗಳನ್ನು ಜಮೀನಿನ ಬದುಗಳಲ್ಲಿ ಹಾಕಲಾಗಿದೆ.
ಮುಂದಿನ ದಿನದಲ್ಲಿ ಅಣಬೆಯನ್ನು ಒಣಗಿಸಿ ಮೌಲ್ಯವರ್ಧನೆ ಮತ್ತು ಸಂಸ್ಕರಣೆ ಮಾಡಿ ಪ್ಯಾಕ್ ಮಾಡಿ ಮಾರಾಟ ಮಾಡಲು ಯೋಜನೆ ರೂಪಿಸಿಕೊಂಡಿದ್ದೇನೆ. ಅಣಬೆ ಬೇಸಾಯ ಯಾರು ಬೇಕಾದರೂ ಮಾಡಬಹುದು. ಆದರೆ ಮಾರುಕಟ್ಟೆ ವಿಚಾರದಲ್ಲಿ ಸೋಲುತ್ತಾರೆ ಎನ್ನುತ್ತಾರೆ ಪ್ರಗತಿಪರ ರೈತ ಮಹಿಳೆ ಗಂಗಾಲಕ್ಷ್ಮಿ.