ಹಾವೇರಿ : ಈ ಉಪ ಚುನಾವಣೆಯಲ್ಲಿ ನನ್ನ ಮಗನನ್ನು ಗೆಲ್ಲಿಸುವುದೇ ಶಿಗ್ಗಾವಿ ಸವಣೂರು ಕ್ಷೇತ್ರದ ಜನತೆಯ ಗುರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸಬರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಮಗನನ್ನು ಸೋಲಿಸುವುದೇ ನನ್ನ ಗುರಿ ಎಂದು ಸಚಿವ ಜಮೀರ್ ಅಹಮದ್ ಖಾನ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭರತ್ ಬೊಮ್ಮಾಯಿಯನ್ನು ಗೆಲ್ಲಿಸುವುದೇ ಈ ಕ್ಷೇತ್ರದ ಜನರ ಗುರಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಜನತಾ ಜನಾರ್ದನರ ತೀರ್ಮಾನವೇ ಅಂತಿಮ ಎಂದು ಹೇಳಿದರು.
ಹಿಂದಿನ ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿಯವರು ಹಣ ಹಂಚಿ ಚುನಾವಣೆ ಗೆದ್ದಿದ್ದಾರೆ ಎಂದು ಸಚಿವ ಜಮೀರ್ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಶಿಗ್ಗಾವಿ ಸವಣೂರು ಕ್ಷೇತ್ರದ ಜನರು ಸ್ವಾಭಿಮಾನಿಗಳಿದ್ದಾರೆ, ಕಾಂಗ್ರೆಸ್ ನವರು ಅವರಿಗೆ ಅವಮಾಮ ಮಾಡುತ್ತಿದ್ದಾರೆ. ಸಚಿವ ಜಮೀರ್ ಅವರು ಕಳೆದ ಚುನಾವಣೆಗಳಲ್ಲಿ ಏನೇನು ಮಾಡಿದ್ದಾರೆ ಎಂದು ಇಡೀ ರಾಜ್ಯಕ್ಕೆ ಗೊತ್ತಾಗಿದೆ ಎಂದು ಹೇಳಿದರು.
ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವೇ ಆಗಿಲ್ಲ ಎನ್ನುವವರು ದಯವಿಟ್ಟು ಒಂದು ಸಲ ಕ್ಷೇತ್ರದಲ್ಲಿ ಓಡಾಡಲಿ, ಅವರು ಓಡಾಡುವ ರಸ್ತೆ, ನೀರು, ಲೈಟು ಯಾರ ಕಾಲದಲ್ಲಿ ಆಗಿದೆ ಎಂದು ಪ್ರಶ್ನಿಸಿದರು. ಸುಮ್ಮನೇ ಬೀದಿಯಲ್ಲಿ ನಿಂತು ಚುನನಾವಣೆಗೋಸ್ಕರ ಹೇಳಿದರೆ ಪ್ರಯೋಜನ ಇಲ್ಲ ಎಂದರು.
ಮಹಾರಾಷ್ಟ್ರ ಚುನಾವಣೆ ಇರುವ ಹಿನ್ನಲೆಯಲ್ಲಿ ವಕ್ಬ್ ಆಸ್ತಿ ವಿಚಾರದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂಬ ಸಚಿವ ಜಮೀರ್ ಅಹಮದ್ ಹೇಳಿಕೆಗೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರ ಚುನಾವಣೆಗೂ ಇಲ್ಲಿಗೆ ಸಂಬಂಧ ಇಲ್ಲ. ಸಚಿವರ ಆದೇಶದಂತೆ ರೈತರಿಗೆ ನೊಟೀಸ್ ನೀಡಿರುವುದಾಗಿ ಬಿಜಾಪುರ ಜಿಲ್ಲಾಧಿಕಾರಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು.
ಶಿಗ್ಗಾವಿ ಉಪ ಚುನಾವಣೆಗೆ ಹತ್ತಕ್ಕೂ ಹೆಚ್ಚು ಸಚಿವರು ಮೂವತ್ತಕ್ಕೂ ಹೆಚ್ಚು ಶಾಸಕರು ಬರುತ್ತಿರುವುದನ್ನು ನೋಡಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವವೇ ಇಲ್ಲ ಎನ್ನುವುದು ಸಾಬೀತಾಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಫಿರ್ ಖಾದ್ರಿ ನಾಮಪತ್ರ ವಾಪಾಸ್ ಪಡೆದಿರುವುದು ಕಾಂಗ್ರೆಸ್ ಪಕ್ಷದ ಆಂತರಿಕವಾದ ನಿರ್ಣಯ. ಅದು ಅವರ ಓಟ್ ಬ್ಯಾಂಕ್ ಗಾಗಿ ತೆಗೆದುಕೊಂಡ ನಿರ್ಣಯ. ಇದು ನಮಗೆ ಪ್ಲಸ್ ಇಲ್ಲ, ಮೈನಸ್ ಇಲ್ಲ. ಯಾಸೀರ್ ಖಾನ್ ಪಠಾಣ್ ರೌಡಿ ಶೀಟರ್ ಅಂತ ಹೇಳಿದ್ದು ನನಗೇ ಟಿಕೆಟ್ ಸಿಗಬೇಕು ಎಂಬ ಉದ್ದೇಶದಿಂದ ಎಂಬ ಖಾದ್ರಿ ಹೇಳಿಕೆ ವಿಚಾರ ಅದಕ್ಕೆ ಉತ್ತರ ಖಾದ್ರಿ ಕೊಡಬೇಕು. ಈಗ ಅವರ ಜೊತೆನೇ ಸೇರಿದ್ದಾರೆ. ಯಾವ ಮಾತು ಎಷ್ಟರ ಮಟ್ಟಿಗೆ ಗಂಭೀರವಾಗಿ ತಗೊಬೇಕು ಅಂತ ನಿಮಗೆ ಗೊತ್ತಾಗಿದೆ ಎಂದು ಹೇಳಿದರು.