ಮೈಸೂರು || ಮೈಸೂರಿನಲ್ಲಿ 32 ಕೆಜಿ ಗಾ*ಜಾ ವಶ; ಇಬ್ಬರ ಬಂಧನ

ಮೈಸೂರು || ಮೈಸೂರಿನಲ್ಲಿ 32 ಕೆಜಿ ಗಾ*ಜಾ ವಶ; ಇಬ್ಬರ ಬಂಧನ

ಮೈಸೂರು : ಒಡಿಶಾ ರಾಜ್ಯದಿಂದ ಮೈಸೂರಿಗೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 32 ಕೆಜಿ 156 ಗ್ರಾಂ ನಿಷೇಧಿತ ಗಾಂಜಾವನ್ನು ಮೈಸೂರಿನ ಸಿಸಿಬಿ ಪೊಲೀಸರು ದಾಳಿ ನಡೆಸಿ ಕಾರು ಮತ್ತು ಮಾಲನ್ನು ವಶಕ್ಕೆ ಪಡೆದುಕೊಂಡು ಈ ಸಂಬಂಧ ಇಬ್ಬರನ್ನು ದಸ್ತಗಿರಿ ಮಾಡಿದ್ದಾರೆ.

ಪ್ರಕರಣ ಸಂಬಂಧ ಒಡಿಶಾ ರಾಜ್ಯದ 36ವರ್ಷದ ಮಿಥುನ್ ದಾಲಿ ಮತ್ತು 33  ವರ್ಷದ ಬಬೂಲಾ ಮದಿ ಎಂಬವರನ್ನು ಬಂಧಿಸಿ ಮಾರುತಿ ಎಸ್‌ಎಕ್ಸ್-ಸಿಜಿ-4/ಜೆಸಿ-7077 ಕಾರು ಮತ್ತು ಕಾರಿನಲ್ಲಿದ್ದ ಗಾಂಜಾ ಹಾಗೂ ಎರಡು ಮೊಬೈಲ್ ಫೋನ್‌ಗಳನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ

ಈ ಆರೋಪಿಗಳು ಅಂತರರಾಜ್ಯ ಪೆಡ್ಲರ್‌ಗಳಾಗಿದ್ದು, ಗಾಂಜಾವನ್ನು ಮೈಸೂರಿನಲ್ಲಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎಂದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಕಳೆದ ಏ. 30ರಂದು ರಾತ್ರಿ 7 ಗಂಟೆಗೆ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಕಿಚೌಕದ 2ನೇ ಕ್ರಾಸ್‌ನಲ್ಲಿರುವ ಬಾಂಬೆ ಟಿಫಾನಿಸ್ ಡಿಲಕ್ಸ್ ಲಾಡ್ಜ್‌ಗೆ ಸೇರಿದ ಪಾರ್ಕಿಂಗ್ ಜಾಗದಲ್ಲಿ ಈ ಕಾರು ನಿಂತಿದ್ದು, ಇದರಲ್ಲಿ ಎಲ್ಲಿಂದಲೋ ತಂದ ಗಾಂಜಾವನ್ನು ಮೈಸೂರಿನಲ್ಲಿ ಮಾರಾಟ ಮಾಡಲು ಆರೋಪಿಗಳು ಪ್ರಯತ್ನಿಸುತ್ತಿದ್ದಾರೆ ಎಂಬ ಬಾತ್ಮೀದಾರರ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದರು.

ಮೈಸೂರು ನಗರ ಪೊಲೀಸ್ ಆಯುಕ್ತರು, ಉಪ ಪೊಲೀಸ್ ಆಯುಕ್ತರು ಹಾಗೂ ಸಿಸಿಬಿ ಎಸಿಪಿ ಮಹಮ್ಮದ್ ಶರೀಫ್ ರಾವುತರ್ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಶಬ್ಬಿರ್ ಹುಸೇನ್, ಪಿಎಸ್‌ಐ ಲೇಪಾಕ್ಷ, ಕೆ.ರಾಜು ಕೋನಕೇರಿ, ಸುಪ್ರಿಯಾ ಮತ್ತು ಎಎಸ್‌ಐ ನಾಗೇಶ್, ಸತೀಶ್ ಹಾಗೂ ಸಿಬ್ಬಂದಿಗಳಾದ ರವಿಕುಮಾರ್, ಮಧುಕುಮಾರ್, ಅನಿಲ್, ಪುರುಷೋತ್ತಮ್, ಮೋಹನಾರಾಧ್ಯ, ದೇವರಾಜು, ದೊಡ್ಡಗೌಡ, ರಾಜು, ಶ್ರೀನಿವಾಸ, ಹಾಗೂ ಮಮತ ಅವರುಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಈ ಸಂಬಂಧ ಮೈಸೂರು ನಗರದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *