ಮೈಸೂರು || 3 ಕಣ್ಣು, 3 ಕೊಂಬು ಇರುವ ಬಸವ ಈ ಊರ ಜನರ ಆರಾಧ್ಯ ದೈವ

ಮೈಸೂರು || 3 ಕಣ್ಣು, 3 ಕೊಂಬು ಇರುವ ಬಸವ ಈ ಊರ ಜನರ ಆರಾಧ್ಯ ದೈವ

ಮೈಸೂರು: ಪ್ರಾಣಿಗಳನ್ನು ದೇವರಂತೆ ಪೂಜಿಸುವುದು ತುಂಬಾ ಹಳೆಯ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ವಿಶೇಷವಾಗಿ ಗೂಳಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡುವ ಪ್ರತೀತಿ ಇದೆ. ಸಾಮಾನ್ಯವಾಗಿ ಗೂಳಿ ಎರಡು ಕಣ್ಣು ಹಾಗೂ ಎರಡು ಕೊಂಬುಗಳನ್ನು ಹೊಂದಿರುತ್ತದೆ. ಆದರೆ ಇಲ್ಲೊಂದು ಗೂಳಿ ತುಂಬಾನೇ ವಿಶೇಷ ಹಾಗೂ ಪವಾಡ.

ಹೌದು.. ಮೈಸೂರಿನ ಹುಣಸೂರು ತಾಲ್ಲೂಕಿನ ಸಂಜೀವ ನಗರದ ಗೂಳಿಯೊಂದು ರಾಜ್ಯದೆಲ್ಲೆಡೆ ಸಾಕಷ್ಟು ಸುದ್ದಿ ಮಾಡಿದೆ. ಈ ಗೂಳಿಗೆ ಮೂರು ಕಣ್ಣು, ಮೂರು ಕೊಂಬು ಇವೆ. ಅಷ್ಟೇ ಅಲ್ಲದೆ ಇದರಿಂದಾದ ಪವಾಡಗಳಿಂದಲೂ ಇದು ಜನಮನದಲ್ಲಿ ಅಚ್ಚಳಿಯದಂತೆ ಉಳಿದಿದೆ. ಹಾಗಾದರೆ ಈ ಗೂಳಿ ಎಲ್ಲಿಯದ್ದು? ಎಲ್ಲಿ ನೆಲೆಸಿತ್ತು? ಇದರಿಂದಾದ ಒಳಿತೇನು? ಜನ ಈ ಗೂಳಿಯ ದೇವಸ್ಥಾನ ಕಟ್ಟಿಸಿದ್ದು ಯಾಕೆ? ಈ ಗೂಳಿಯಂತೆ ವಿಗ್ರಹ ಮಾಡಿಸಿದ್ದು ಎಲ್ಲಿ? ಎಲ್ಲವನ್ನೂ ತಿಳಿಯೋಣ.

ಊರ ಜನ ಪ್ರೀತಿ ಗಳಿಸಿದ ಮೂರು ಕಣ್ಣಿನ ಬಸವ ಹೆಚ್ಡಿ ಕೋಟಿ ತಾಲೂಕಿನ ಒಂದು ಗ್ರಾಮದಲ್ಲಿ ಒಂದು ಕರು ಹುಟ್ಟಿತ್ತು. ಈ ಕುರು ಹುಟ್ಟಿದಾಗ ಮೂರು ಕಣ್ಣು ಮೂರು ಕೊಂಬು ಇರುವುದರಿಂದ ಇದನ್ನು ಮೈಸೂರಿನ ಹುಣಸೂರು ತಾಲ್ಲೂಕಿನ ಪವಾಡ ಪುರುಷನ ಐಕ್ಯ ಸ್ಥಳ ಗದ್ದಿಗೆ ಶ್ರೀ ಗುರು ಕೆಂಡಗಣ್ಣೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ತಂದು ಬಿಡಲಾಯಿತು.

ಮುದ್ದಾಗಿದ್ದ ಈ ಕರುವನ್ನು ಗದ್ದುಗೆಯಲ್ಲಿ ತುಂಬಾ ಚೆನ್ನಾಗಿ ನೋಡಿಕೊಳ್ಳಲಾಗುತ್ತಿತ್ತು. ಆದರೆ ಈ ಕರು ಗದ್ದುಗೆಯಲ್ಲಿ ಇರಲು ಮನಸ್ಸು ಮಾಡಲಿಲ್ಲ. ಪಕ್ಕದ ಸಂಜೀವ ನಗರದ ಜಮೀನುಗಳಲ್ಲಿ ವಾಸಿಸಲು ಶುರು ಮಾಡಿತು. ಅಲ್ಲಿನ ಜನರೊಂದಿಗೆ ಬೆರೆತು ಹೋಯ್ತು. ಯಾವುದೇ ಹಾನಿ ಮಾಡದೇ ಓಡಾಡಿಕೊಂಡು ಇದ್ದ ಈ ಕರುವಿಗೆ ಜನ ಪ್ರೀತಿಯಿಂದ ಆಹಾರ ಕೂಡ ನೀಡುತ್ತಿದ್ದರು. ಮೂರು ಕಣ್ಣು ಇರುವ ಈ ಬಸವ ನಮ್ಮ ಪಾಲಿನ ದೈವ ಎಂದು ಪೂಜಾ ಭಾವದಿಂದ ಜನ ಕಾಣಲು ಶುರು ಮಾಡಿದರು. ಬಸವ ಕೂಡ ಸ್ಥಳೀಯರೊಂದಿಗೆ ಬೆರೆತು ಹೋಗಿತ್ತು.

ಇದು ಸಾಕ್ಷಾತ್ ಶಿವನ ರೂಪ ಎಂದು ರಾಜ್ಯದಲ್ಲೆಡೆ ಸುದ್ದಿ ಮಾಡಿತು. ಇದನ್ನು ಕಾಣಲು ದೂರದೂರುಗಳಿಂದ ಜನ ಬರಲು ಶುರು ಮಾಡಿದ್ದರು. ಯಾಕೆಂದರೆ ಈ ಬಸವನ ಮುಂದೆ ನಿಂತು ಭಕ್ತಿಯಿಂದ ಬೇಡಿಕೊಂಡರೆ ಆ ಬೇಡಿಕೆ ಈಡೇರುತ್ತದೆ. ಅಷ್ಟೇ ಅಲ್ಲ ಬಸವ ಇದ್ದ ಜಮೀನು, ಭೇಟಿ ನೀಡುತ್ತಿದ್ದ ಮನೆ ಅಲ್ಲದೆ ಊರ ಜನರ ಜೀವನ ಕೂಡ ಆರ್ಥಿಕವಾಗಿ ಸಾಕಷ್ಟು ಸುಧಾರಿಸಿದೆ. ಹೀಗಾಗಿ ಈ ಬಸವನ ಮೇಲೆ ಜನರಿಗೆ ಅಪಾರ ನಂಬಿಕೆ ಹಾಗೂ ಪ್ರೀತಿ.

ಕಷ್ಟ ಕೊಟ್ಟವರಿಗೆ ಶಾಪ ಕೊಡುವ ಮೂರು ಕೊಂಬಿನ ಬಸವ ಊರ ಜನರ ಪ್ರೀತಿ ಗಳಿಸಿದ ಈ ಬಸವನಿಗೆ ಒಬ್ಬ ವ್ಯಕ್ತಿ ಜಮೀನು ಹಾಳು ಮಾಡಿದ ಆರೋಪ ಹೋರಿಸಿ ಕೋಲಿನಿಂದ ಹೊಡೆದು ಹಿಂಸೆ ನೀಡಿದ್ದನು. ಈ ಘಟನೆ ಆದ ಕೆಲವೇ ದಿನಗಳಲ್ಲಿ ಈ ವ್ಯಕ್ತಿ ಆಸ್ಪತ್ರೆ ಸೇರಿದ. ತನ್ನ ಜಮೀನು ಮಾರುವ ಸ್ಥಿತಿ ಆತನಿಗೆ ಎದುರಾಯ್ತು. ಕೇವಲ ಜಮೀನು ಮಾತ್ರವಲ್ಲ ಆತ ತನ್ನ ಮನೆಯನ್ನೂ ಮಾರಿ ಊರು ಬಿಟ್ಟು ಹೋದನಂತೆ. ಸ್ವತ: ಊರು ಬಿಟ್ಟ ಆ ವ್ಯಕ್ತಿ ಬಸವನ ಬಳಿ ಬಂದು ಕ್ಷಮೆ ಕೇಳಿ, ತನಗಾದ ನೋವನ್ನು ಎಲ್ಲರ ಮುಂದೆ ಹೇಳಿಕೊಂಡಿದ್ದಾನಂತೆ. ಈ ಘಟನೆ ಬಸವನ ಮೇಲೆ ಊರ ಜನರ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗೆ ಹಲವಾರು ಪವಾಡಗಳು ಈ ಬಸವನಿಂದ ನಡೆದಿವೆ. ಹೀಗಾಗಿ ಯಾರೂ ಕೂಡ ಈ ಬಸವನಿಗೆ ತೊಂದರೆ ಕೊಡುತ್ತಿರಲಿಲ್ಲ. ಪಂಚಲೋಹದಿಂದ ಮೂರು ಕಣ್ಣಿನ ಬಸವನ ವಿಗ್ರಹ ಸಿದ್ಧ ಆದರೆ ಒಂದು ದಿನ ವಯಸ್ಸಾಗಿ ಬಸವ ತೀರಿ ಹೋಯ್ತು. ಬೇಸರಗೊಂಡ ಜನ ಇದನ್ನು ಮೆರವಣಿಗೆ ಮಾಡಿ ಅದನ್ನು ಮಣ್ಣು ಮಾಡಿದ ಸ್ಥಳದಲ್ಲೇ ಅದರ ನೆನಪಿಗಾಗಿ ದೇವಸ್ಥಾನವನ್ನು ಕಟ್ಟಿಸಿದ್ದಾರೆ. ಇದೀಗ ಆ ದೇವಸ್ಥಾನದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಲು ತಯಾರಿಗಳು ನಡೆದಿವೆ. ಶಿವ ರೂಪಿಯಾದ ಬಸವನಂತೆ ವಿಗ್ರಹವನ್ನು ತಮಿಳುನಾಡಿನ ಕುಂಭಕೋಣಂ ಬಳಿಯ ಸ್ವಾಮಿಮಲೈನಲ್ಲಿರುವ ಪ್ರಸಿದ್ಧ ಕಂಚಿನ ವಿಗ್ರಹ ತಯಾರಿಕಾ ಕಂಪನಿ ತಯಾರಿಸುತ್ತಿದೆ. ಹುಣಸೂರು ತಾಲ್ಲೂಕಿನ ಸಂಜೀವ ನಗರದ ಜನರು ಒಂದು ಕಾಲದಲ್ಲಿ ವಾಸಿಸುತ್ತಿದ್ದ ಮತ್ತು ಪೂಜಿಸುತ್ತಿದ್ದ ಈ ಬಸವನ ನೆನಪಿಗಾಗಿ ಈ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲೇ ಮುಕ್ಕಣ್ಣೇಶ್ವರ (ಮೂರು ಕಣ್ಣುಗಳನ್ನು ಹೊಂದಿರುವ ದೇವರು) ಬಸವನ ವಿಗ್ರಹ ತಯಾರಾಗಲಿದ್ದು, ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ಅದನ್ನು ಸ್ಥಾಪಿಸಲಾಗುವುದು. ಪಂಚ ಲೋಹದ ಬಸವನ ವಿಗ್ರಹವನ್ನು ತಮಿಳುನಾಡಿನಲ್ಲಿ 27 ಲಕ್ಷ ಖರ್ಚು ಮಾಡಿ ತಯಾರಿಸಲಾಗುತ್ತಿದೆ. ಈ ವಿಗ್ರಹದ ವಿಶೇಷತೆ ಅಂದರೆ ಇದು ನಿಂತುಕೊಂಡ ಬಸವನ ವಿಗ್ರಹವಾಗಿದೆ. ಎಂಟು ನೂರು ಕೆಜಿ ತೂಕವನ್ನು ಹೊಂದಿದ್ದು, ಐದು ಅಡಿ ಉದ್ದ ಇದೆ. ಈ ರೀತಿಯ ವಿಗ್ರಹ ಕರ್ನಾಟಕದಲ್ಲಿ ತುಂಬಾ ವಿರಳವಾಗಿದೆ. ಪ್ರತೀ ವರ್ಷ ಈ ಮುಕ್ಕಣ್ಣೇಶ್ವರ ಬಸವನ ಪುಣ್ಯತಿಥಿಯಂದು ಪೂಜೆ ಮಾಡಿ ಅನ್ನದಾನ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ.

Leave a Reply

Your email address will not be published. Required fields are marked *