ಮೈಸೂರು: ಇನ್ನೇನು ಮೈಸೂರು ದಸರಾ ಬಂತು. ಮಹೋತ್ಸವಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿವೆ. ಬಂಗಾರದ ಅಂಬಾರಿ ಹೊರಲಿರುವ ಅಭಿಮನ್ಯುವಿಗೆ ಪೂರ್ವಸಿದ್ದತೆ ಮಾಡಲಾಗುತಿದ್ದು. ಮರದ ಅಂಬಾರಿಯನ್ನು ಅಭಿಮನ್ಯವಿನ ಮೇಲೆ ಕೂರಿಸಿ ಪ್ರಾಕ್ಟೀಸ್ ಮಾಡಿಸುತಿದ್ದಾರೆ. ಆನೆಯ ತಾಲೀಮಿಗೂ ಮುನ್ನ ೧೪ ಗಜಪಡೆಗೆ ವಿಶೇಷವಾಗಿ ಸಾಂಪ್ರದಾಯಕ ಪೂಜೆ ನಡೆಯುತ್ತದೆ.
ಅರಮನೆ ಅಂಗಳದಲ್ಲಿನ ಕೋಡಿ ಸೋಮೇಶ್ವರ ದೇವಾಲಯದ ಎದುರು ಅಭಿಮನ್ಯುವಿನ ಹೆಗಲ ಮೇಲೆ ಗಾದಿ ಮತ್ತು ನಮ್ದ ಕಟ್ಟಲಾಗಿತ್ತು. ನಂತರ ಎಲ್ಲ ಆನೆಗಳನ್ನು ಸಾಲಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿವಾಸದ ಮುಂಭಾಗ ಮರದ ಅಂಬಾರಿ ಕಟ್ಟುವ ಜಾಗಕ್ಕೆ ಕರೆತರಲಾಯಿತು. ಅಂಬಾರಿ ಕಟ್ಟಿದ ನಂತರ ಅಭಿಮನ್ಯು ರಾಜಪಥದಲ್ಲಿ ಗಾಂಭೀರ್ಯದಿAದ ಹೆಜ್ಜೆ ಹಾಕಿದ.
ಇದಕ್ಕೂ ಮುನ್ನ, ಮರದ ಅಂಬಾರಿಗೆ ತಯಾರಿ ಮಾಡಿಕೊಂಡಿದ್ದ ಸಿಬ್ಬಂದಿ ಮತ್ತು ಅರಮನೆಯ ಅರ್ಚಕ ಪ್ರಹ್ಲಾದ್ ರಾವ್ ಅವರು ಮೊದಲು ಅಂಬಾರಿಗೆ ಹೂ ಇಟ್ಟು, ಅರಿಶಿನ, ಕುಂಕಮ ಹಚ್ಚಿ, ಆನೆಗಳ ಕಾಲಿಗೆ ನೀರು ಹಾಕಿ ತೊಳೆದು ಪಾದಪೂಜೆ ಮಾಡಿದರು. ಬಳಿಕ ಅರಿಶಿನ, ಕುಂಕುಮ ಹಚ್ಚಿ, ಗಂಧದಲ್ಲಿ ಓಂಕಾರ ಬರೆದು, ಬಾಳೆ ಹಣ್ಣು, ತೆಂಗಿನ ಕಾಯಿ, ವಿವಿಧ ತಿಂಡಿ ತಿನಿಸುಗಳನ್ನಿಟ್ಟರು. ಗಂಧದ ಕಡ್ಡಿ ಹಚ್ಚಿ ಅಂಬಾರಿ ಮೇಲೆ ಗಣೇಶ ವಿಗ್ರಹವಿಟ್ಟು ಗಣಪತಿ ಪೂಜೆ ನೆರವೇರಿಸಿದರು. ಡಿಸಿಎಫ್ ಪ್ರಭುಗೌಡ ಅವರು ಕುಂಬಳ ಕಾಯಿಯನ್ನು ಎಲ್ಲ ಆನೆಗಳಿಗೂ ಸುತ್ತು ತಂದು ಒಡೆದರು. ಮರದ ಅಂಬಾರಿಗೂ ಪೂಜೆ ಸಲ್ಲಿಸಿ ನೆರೆದಿದ್ದ ಎಲ್ಲರಿಗೂ ಮಂಗಳಾರತಿ ನೀಡಿದರು. ಇದಾದ ಬಳಿಕ ಅಭಿಮನ್ಯುವಿನ ಬೆನ್ನಿನ ಮೇಲೆ ಕ್ರೇನ್ ಮೂಲಕ ಮರದ ಅಂಬಾರಿ ಕೂರಿಸಿ, ಮರಳು ಮೂಟೆಗಳನ್ನು ಇಡಲಾಯಿತು. ಕುಮ್ಕಿ ಆನೆಗಳಾದ ಲಕ್ಷ್ಮೀ ಹಾಗೂ ಹಿರಣ್ಯ ಆನೆಗಳ ಜೊತೆಯಲ್ಲಿ ಅಭಿಮನ್ಯು ರಾಜಬೀದಿಯಲ್ಲಿ ಹೆಜ್ಜೆ ಹಾಕಿದನು.