ಮೈಸೂರು: ಸದನದಲ್ಲೇ ಹನಿಟ್ರ್ಯಾಪ್ ಬಗ್ಗೆ ಬಾಂಬ್ ಸಿಡಿಸಿದ್ದ ಕಾಂಗ್ರೆಸ್ನ ಪ್ರಭಾವಿ ಸಚಿವರಾದ ಕೆ.ಎನ್.ರಾಜಣ್ಣ ದಿಢೀರ್ ರಾಜಕೀಯ ನಿವೃತ್ತಿ ಘೋಷಿಸುವ ಮೂಲಕ ಶಾಕ್ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದ ರಾಜಣ್ಣ ಈಗ ದಿಢೀರ್ ರಾಜಕೀಯದಿಂದ ದೂರ ಸರಿಯುವ ಮಾತುಗಳನ್ನಾಡಿರುವುದು ಅಚ್ಚರಿ ಮೂಡಿಸಿದೆ. ಸದ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಹಕಾರ ಖಾತೆ ಸಚಿವರಾಗಿರುವ ರಾಜಣ್ಣ ಅವರು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ರಾಜಣ್ಣ ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು ಎಂಬ ವಿವರ ಇಲ್ಲಿದೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಅವರು ವಯಸ್ಸಿನ ಕಾರಣದಿಂದಾಗಿ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹಾಗಾಗಿ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ಆದರೆ, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದು ರಾಜಣ್ಣ ಹೇಳಿದ್ದಾರೆ. ಮುಂದಿನ ಚುನಾವಣೆ ವೇಳೆಗೆ ನನ್ನ ವಯಸ್ಸು 78 ವರ್ಷ ಆಗಲಿದೆ. ಹೀಗಾಗಿ ಚುನಾವಣೆ ರಾಜಕಾರಣಕ್ಕೆ ಗುಡ್ ಬೈ ಹೇಳುತ್ತೇನೆ ಎಂದಿದ್ದಾರೆ.
ವಯಸ್ಸಾದ ಕಾರಣ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಒಂದು ವೇಳೆ ಸ್ಪರ್ಧಿಸಿ ಗೆದ್ದರೂ ಜನರ ಸೇವೆ ಮಾಡುವುದು ತುಂಬಾ ಕಷ್ಟ. ನನ್ನ ಆರೋಗ್ಯದ ದೃಷ್ಟಿಯಿಂದಲೂ ಇದು ತುಂಬಾ ಕಷ್ಟ. ಹಾಗಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸಲ್ಲ, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವೆ ಎಂದಿದ್ದಾರೆ.
ರಾಜಣ್ಣ ಅವರು ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ವಿರುದ್ಧವೇ ಬಹಿರಂಗ ಹೇಳಿಕೆ ನೀಡುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ ಸಚಿವ ಸ್ಥಾನಕ್ಕೆ ರಾಜಣ್ಣ ಅವರು ರಾಜೀನಾಮೆ ನೀಡುತ್ತಾರೆ ಎಂಬ ಪೋಸ್ಟ್ ಕೂಡ ವೈರಲ್ ಆಗಿತ್ತು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ತಾವೇ ಖುದ್ದಾಗಿ ಹಲವು ಬಾರಿ ಹೇಳಿದ್ದರು.
ಈ ಹಿಂದೆ ಡಿಕೆ ಶಿವಕುಮಾರ್ ಬಗ್ಗೆ ಹರಿಹಾಯ್ದಿದ್ದ ರಾಜಣ್ಣ, ಇದೀಗ ಅವರು ಹಾಡಿ ಹೊಗಳಿದ್ದಾರೆ. ಬೆಂಗಳೂರಿನಲ್ಲಿ ಮಳೆಯಿಂದ ಆಗಿರುವ ಪ್ರವಾಹ ಪರಿಸ್ಥಿತಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ತುಂಬಾ ಚೆನ್ನಾಗಿ ನಿಭಾಯಿಸುತ್ತಿದ್ದಾರೆ. ಅವರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರದಲ್ಲಿ ಭಾರಿ ಮಳೆಯಿಂದ ಹಲವೆಡೆ ಹಾನಿಯಾಗಿದ್ದು, ಕೆರೆ, ಕಾಲುವೆ, ಚರಂಡಿ ಒತ್ತುವರಿಯಿಂದ ಈ ಪರಿಸ್ಥಿತಿ ಎದುರಾಗಿದೆ. ನೀರು ಹೇಗೆ ಹರಿಯಬೇಕು ಎಂದು ನಾವು ಹೇಳಲು ಸಾಧ್ಯವಿಲ್ಲ, ಏಕೆಂದರೆ ಅದಕ್ಕೆ ಅದರ ದಾರಿ ಗೊತ್ತಿದೆ ಎಂದಿದ್ದಾರೆ.