ಮೈಸೂರು: ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸ ವರ್ಷಾಚರಣೆ ಅಂಗವಾಗಿ ಜನವರಿ 1ರಂದು ದೇವಸ್ಥಾನದ ಸಂಸ್ಥಾಪಕ ಪ್ರೊ. ಭಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ ಭಕ್ತರಿಗೆ ಎರಡು ಲಕ್ಷ ತಿರುಪತಿ ಮಾದರಿ ಲಾಡು ವಿತರಿಸಲಾಗುವುದು ಎಂದು ದೇವಸ್ಥಾನದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 1ರ ಬೆಳಗಿನ ಜಾವ 4 ಗಂಟೆಯಿಂದ ಶ್ರೀ ಯೋಗಾನರಸಿಂಹಸ್ವಾಮಿಗೆ ವಿಶೇಷ ಅಲಂಕಾರ ಮತ್ತು ಶ್ರೀರಂಗಂ ಕ್ಷೇತ್ರ, ಕಾಂಚಿಪುರ ಕ್ಷೇತ್ರ, ಮಧುರೈ ಕ್ಷೇತ್ರದಿಂದ ತರಿಸಿರುವ ತೋಮಾಲೆ ಹಾಗೂ ಸ್ವರ್ಣಪುಷ್ಪದಿಂದ ಸಹಸ್ರನಾಮಾರ್ಚನೆ ಮಾಡಲಾಗುವುದು. ಉತ್ಸವ ಮೂರ್ತಿಯಾದ ರಂಗನಾಥಸ್ವಾಮಿಗೆ ಏಕಾದಶ ಪ್ರಾಕಾರೋತ್ಸವ ಹಾಗೂ 50 ಕ್ವಿಂಟಾಲ್ ಪುಳಿಯೊಗರೆಯನ್ನು ನೈವೇದ್ಯವಾಗಿ ಅರ್ಪಿಸಲಾಗುವುದು. ಬಳಿಕ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ 2 ಲಕ್ಷ ಲಾಡು ವಿತರಿಸಲಾಗುವುದು ಎಂದು ಹೇಳಿದರು.
ಕಳೆದ ಒಂದು ವಾರದಿಂದ ಅಂದರೆ ಡಿ.20 ರಿಂದ ಲಾಡು ತಯಾರು ಮಾಡುವ ಕಾರ್ಯ ಆರಂಭವಾಗಿದೆ. ಇದು ಡಿ.31 ರವರೆಗೂ ನಡೆಯುತ್ತದೆ. ಅಂದಾಜು 2 ಕೆ.ಜಿ. ತೂಕದ ಹತ್ತು ಸಾವಿರ ಲಾಡು, 150 ಗ್ರಾಂ ತೂಕದ 2 ಲಕ್ಷ ಲಾಡು ತಯಾರು ಮಾಡಲಾಗುತ್ತಿದೆ. ಲಾಡು ತಯಾರಿಕೆಗೆ ನೂರು ಮಂದಿ ನುರಿತ ಬಾಣಸಿಗರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.
ಲಾಡು ತಯಾರಿಗೆ 100 ಕ್ವಿಂಟಾಲ್ ಕಡ್ಲೆ ಹಿಟ್ಟು, 200 ಕ್ವಿಂಟಾಲ್ ಸಕ್ಕರೆ, 10 ಸಾವಿರ ಲೀಟರ್ ಖಾದ್ಯ ತೈಲ, 500 ಕೆ.ಜಿ. ಗೋಡಂಬಿ, 500 ಕೆ.ಜಿ. ಒಣದ್ರಾಕ್ಷಿ, 250 ಕೆ.ಜಿ ಬಾದಾಮಿ, 1 ಸಾವಿರ ಕೆ.ಜಿ. ಡೈಮಂಡ್ ಸಕ್ಕರೆ, 2 ಸಾವಿರ ಕೆ.ಜಿ. ಬೂರಾ ಸಕ್ಕರೆ, 50 ಕೆ.ಜಿ. ಪಿಸ್ತಾ, 50 ಕೆ.ಜಿ. ಏಲಕ್ಕಿ, 50 ಕೆ.ಜಿ. ಜಾಕಾಯಿ- ಜಾಪತ್ರೆ, 50 ಕೆ.ಜಿ. ಪಚ್ಚೆ ಕರ್ಪೂರ, 200 ಕೆ.ಜಿ. ಲವಂಗ ಬಳಸಲಾಗಿದೆ ಎಂದು ಅವರು ವಿವರಿಸಿದರು.
1993ನೇ ಇಸವಿಯಲ್ಲಿ ವರನಟ ಡಾ. ರಾಜ್ ಕುಮಾರ್ ಅವರು ಪತ್ನಿ ಪಾರ್ವತಮ್ಮ ಸಮೇತರಾಗಿ ಯೋಗಾ ನರಸಿಂಹಸ್ವಾಮಿ ದೇವಾಲಯಕ್ಕೆ ಬಂದಿದ್ದರು. ದೇವರ ದರ್ಶನ ಪಡೆದುಕೊಂಡು ಭಾಷ್ಯಂ ಸ್ವಾಮೀಜಿ ಅವರೊಂದಿಗೆ ಲೋಕಾಭಿರಾಮವಾಗಿ ಮಾತನಾಡುತ್ತಾ, ಈಗ ತಿರುಪತಿ ಲಾಡು ಸಾಮಾನ್ಯರಿಗೆ ದೊರಕುವುದು ಕಷ್ಟವಾಗುತ್ತಿದೆ. ಆದ್ದರಿಂದ ಈ ದೇವಾಲಯದಲ್ಲಿ ತಿರುಪತಿ ಮಾದರಿಯ ಲಾಡು ತಯಾರು ಮಾಡಿ ಬರುವ ಭಕ್ತರಿಗೆ ಪ್ರಸಾದ ರೂಪವಾಗಿ ಕೊಡಬಹುದಲ್ಲವೇ ಎಂದು ತಿಳಿಸಿದರು.
ಈ ಕಾರ್ಯ ಶುರು ಮಾಡಲು ತಮ್ಮ ಕುಟುಂಬದಿಂದ ದೇಣಿಗೆ ಎಂದು ಒಂದು ಸಾವಿರ ರೂಪಾಯಿ ಹಣ ನೀಡಿದ್ದರು. ನಂತರ ಸ್ವಾಮೀಜಿ ಅವರು ತಿರುಪತಿಯಿಂದಲೇ ನಾಲ್ಕು ಜನ ಬಾಣಸಿಗರನ್ನು ಕರೆಯಿಸಿ, ಒಂದು ಸಾವಿರ ಲಾಡು ತಯಾರು ಮಾಡಿಸಿ, 1994ರ ಜನವರಿ 1ರಂದು ಭಕ್ತರಿಗೆ ವಿತರಣೆ ಮಾಡಿದರು. ಅಂದಿನಿಂದ ವರ್ಷ-ವರ್ಷ ಭಕ್ತರ ಸಂಖ್ಯೆ ಹೆಚ್ಚಾಗುತ್ತಲಿದೆ. ಸತ್ಕಾರ್ಯ ಮುಂದುವರೆದಿದೆ ಎಂದು ಶ್ರೀನಿವಾಸನ್ ಇತಿಹಾಸವನ್ನು ತಿಳಿಸಿದರು. ಹೊಸ ವರ್ಷದಂದು ಡಾ.ರಾಜ್ ಅವರ ಕುಟುಂಬ ಹಾಗೂ ಅವರ ಸಂಬಂಧಿಕರ ಕುಟುಂಬಗಳಿಗೆ ಲಾಡು ಪ್ರಸಾದವನ್ನು ತಲುಪಿಸಲಾಗುತ್ತದೆ. ರಾಜ್ ಅವರ ಪುತ್ರ ಶಿವರಾಜ್ಕುಮಾರ್ ಅವರು ಅಮೆರೀಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಶೀಘ್ರವೇ ಗುಣಮುಖರಾಗಿ ನಾಡಿಗೆ ವಾಪಸ್ ಬಂದು ಕಲಾಸೇವೆಯನ್ನು ಮುಂದುವರೆಸಲಿ ಎಂದು ವಿಶೇಷ ಪೂಜೆ ಮಾಡಲಾಗುತ್ತದೆ. ಅಲ್ಲದೇ ಶಿವರಾಜ್ ಕುಮಾರ್ ಅವರ ಜೊತೆ ಭಾಷ್ಯಂ ಸ್ವಾಮೀಜಿ ವಿಡಿಯೋ ಕಾಲ್ ಮುಖಾಂತರ ಮಾತನಾಡಿದ್ದಾರೆ ಎಂದು ತಿಳಿಸಿದರು.
ಲೋಕ ಕಲ್ಯಾಣಾರ್ಥವಾಗಿ ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಪ್ರಪಂಚದ ಎಲ್ಲೆಡೆ ಆಚರಿಸುವ ಕ್ರೈಸ್ತ ವರ್ಷಾರಂಭದ ಹಿನ್ನೆಲೆಯಲ್ಲಿ ವಿಶ್ವಶಾಂತಿ, ಭಾತೃತ್ವ ಮತ್ತು ಸರ್ವಧರ್ಮ ಸಮನ್ವಯತೆಗಾಗಿ ಮತ್ತು ನಾಡಿನ ಎಲ್ಲಾ ಜನರ ಒಳಿತಿಗಾಗಿ ಪ್ರಾರ್ಥಿಸಿ ಈ ಲಾಡು ಪ್ರಸಾದ ನಿವೇದನೆ ಮತ್ತು ಭಕ್ತಾದಿಗಳಿಗೆ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಸಂಸ್ಥಾಪಕ ಪ್ರೊ. ಭಾಷ್ಯಂಸ್ವಾಮಿ, ಡಾ.ರಾಜ್ ಕುಮಾರ್ ಪುತ್ರಿ ಲಕ್ಷ್ಮೀ, ಅಳಿಯ ಗೋವಿಂದರಾಜು, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.