ಮೈಸೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸರಿಂದ ಹಿಡಿದು ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ಮೈಸೂರಿನ ಖಾಸಗಿ ರೆಸಾರ್ಟ್ನಲ್ಲಿಂದು ಮೈಸೂರು, ಚಾಮರಾಜನಗರ ಮತ್ತು ಕೊಡಗು ಸೇರಿದಂತೆ ಮೂರು ಜಿಲ್ಲೆಗಳ ಹಾಲಿ ಶಾಸಕರು, ಮಾಜಿ ಶಾಸಕರು ಮತ್ತು ಜಿಲ್ಲಾ ಮಟ್ಟದ ಪ್ರಮುಖ ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.
ಉದಯಗಿರಿಯಲ್ಲಿ ನಡೆದ ಘಟನೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹದ್ದು. ಗೃಹ ಸಚಿವರು ಅಸಹಾಯಕತೆಯಿಂದ ಮಾತನಾಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕಲ್ಲು ತೂರಿದ್ದರೂ ಸುಮ್ಮನಿದ್ದರು. ಪೋಸ್ಟ್ ಹಾಕಿದ ವ್ಯಕ್ತಿಯ ಗಡೀಪಾರಿಗೆ ಮುಂದಾಗಿದ್ದರು. ಪೊಲೀಸರು ಸೇರಿದಂತೆ ಜನರಿಗೆ ರಕ್ಷಣೆ ಇಲ್ಲದಾಗಿದೆ. ಮಡಿಕೇರಿಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದರೂ, ಕೂಡ ಪೊಲೀಸರಿಂದ ಏನೂ ಮಾಡಲು ಆಗ್ತಿಲ್ಲ. ಯಾಕೆಂದ್ರೆ ಆತ ಕಾಂಗ್ರೆಸ್ ಮುಖಂಡ. ಇದೆಲ್ಲವನ್ನೂ ನೋಡಿದ್ರೆ ಪೊಲೀಸರು ಕೈಕಟ್ಟಿ ಕೂರುವಂತೆ ಮಾಡಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುತ್ತಿದ್ದೇವೆ ಎಂಬ ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಗ್ಯಾರಂಟಿಗಳಿಗೆ ಬೇರೆ ಬೇರೆ ಇಲಾಖೆಯ ಹಣ ಬಳಸಿಕೊಳ್ಳಲಾಗುತ್ತಿದೆ. ಆದ್ರೂ ಗ್ಯಾರಂಟಿ ಕೊಡಲು ಆಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡುತ್ತಿಲ್ಲ. ಹಾಗಾಗಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಅಂತ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.