ಮೈಸೂರು: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ಮ-ನರೇಗಾ) ಕೂಲಿ ಹೆಚ್ಚಳದಿಂದ ಮೈಸೂರು ಜಿಲ್ಲೆಯ ಕೂಲಿ ಕಾರ್ಮಿಕರು ಸಂತಸಗೊಂಡಿದ್ದಾರೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವ ಕೂಲಿ ಕಾರ್ಮಿಕರ ದಿನಗೂಲಿಯನ್ನು 349 ರೂಪಾಯಿನಿಂದ 370ಗೆ ಹೆಚ್ಚಿಸಲಾಗಿದ್ದು, ದುಡಿದು ತಿನ್ನಲು ಮತ್ತಷ್ಟು ಶಕ್ತಿ ಬಂದಂತಾಗಿದೆ ಎಂದು ಮೈಸೂರಿನ ನರೇಗಾ ಕಾರ್ಮಿಕರು ಸಂಸತ ವ್ಯಕ್ತಪಡಿಸಿದ್ದಾರೆ.

ಮ-ನರೇಗಾ ಕೂಲಿ ಹೆಚ್ಚಳ ಕುರಿತು ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಯುಕೇಶ್ ಕುಮಾರ್ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಭಾಗದ ಅಕುಶಲ ಕೂಲಿ ಕೆಲಸ ಮಾಡುವ ಕೂಲಿಕಾರರ ದಿನಗೂಲಿ ದರವನ್ನು 349 ರಿಂದ 370 ರೂ.ಗಳಿಗೆ ಹೆಚ್ಚಳ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ
2024-25 ನೇ ಸಾಲಿನಲ್ಲಿ 349 ರೂ. ಗಳಿಂದ ಕೂಲಿಯನ್ನು 2025-26 ನೇ ಸಾಲಿನಲ್ಲಿ 370 ರೂ.ಗಳಿಗೆ ಕೂಲಿ ಹೆಚ್ಚಳ ಮಾಡಿದೆ. ಏಪ್ರಿಲ್1, 2025 ರಿಂದ 370 ರೂ.ಗಳ ಕೂಲಿ ಜಾರಿಯಲ್ಲಿರುತ್ತದೆ. ಅರ್ಹ ಮತ್ತು ನೊಂದಾಯಿತ ಕೂಲಿಕಾರ್ಮಿಕರು ಸೌಲಭ್ಯವನ್ನು ಪಡೆದುಕೊಳ್ಳಬಹುದು. ಮ-ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶ ಪ್ರತಿ ಅರ್ಹ ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ 100 ದಿನಗಳ ಕೂಲಿ ಕೆಲಸದ ಖಾತ್ರಿ ನೀಡಿದೆ. ಒಂದು ಕುಟುಂಬ ನೂರು ದಿನ ಕೆಲಸ ಮಾಡಿದರೆ 37,000 ರೂ.ಗಳನ್ನು ಪಡೆದುಕೊಳ್ಳಬಹುದು. ಗಂಡು ಹೆಣ್ಣಿಗೆ ದಿನಕ್ಕೆ 370 ರೂ.ಗಳ ಸಮಾನ ಕೂಲಿ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು. ಈ ಬಗ್ಗೆ ಮೈಸೂರು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ(ಅಭಿವೃದ್ಧಿ) ಡಾ.ಎಂ.ಕೃಷ್ಣರಾಜು ಮಾತನಾಡಿ, ಗ್ರಾಮೀಣ ಭಾಗದಲ್ಲಿ ದುಡಿಯುವವರೇ ಇಲ್ಲವಾಗಿದೆ. ಇಂತಹ ವೇಳೆ ಜಿಲ್ಲಾ ಪಂಚಾಯಿತಿ ಸಾಕಷ್ಟು ಕಾರ್ಯಕ್ರಮಗಳನ್ನು ಮೂಡಿಸಿ ಅರಿವು ಮೂಡಿಸಿ ಹಲವು ಸೌಲಭ್ಯದ ನೆರವು ನೀಡಿದ ಬಳಿಕ ಹೆಚ್ಚಿನ ಮಂದಿ ಇತ್ತ ಮುಖ ಮಾಡಿದ್ದಾರೆ. ಇಂತಹ ವೇಳೆ ಕೂಲಿ ಹೆಚ್ಚಳದಿಂದ ಇನ್ನಷ್ಟು ಮಂದಿ ಇದರ ಲಾಭ ಪಡೆಯುವ ನಿಟ್ಟಿನಲ್ಲಿ ಈ ಹೆಚ್ಚಳ ಸದುಪಯೋಗವಾಗಲಿದೆ. ಇದನ್ನು ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಅನೇಕರಿಗೆ ಕೆಲಸ ನೀಡುವ ಮೂಲಕ ಜೀವನ ನೀಡಿದೆ. ಓದಿದರೂ ಉದ್ಯೋಗ ಸಿಗದ ಕೆಲವು ಯುವಕರು ಕೆಲಸ ಸಿಗುವವರೆಗೂ ಮ-ನರೇಗಾ ಕೆಲಸ ಮಾಡಿಕೊಂಡು ಸಂಪಾದಿಸುತ್ತಿದ್ದಾರೆ. ತಗಡೂರು ಗ್ರಾಮ ಪಂಚಾಯತ್ನ ರವಿ ಕುಮಾರ್ ಎನ್ನುವಾತ ಈ ಹಿಂದೆ ನರೇಗಾ ಕೆಲಸ ಮಾಡಿ ಕಾಲೇಜಿನ ಶುಲ್ಕ ಸಂಪಾದಿಸಿಕೊಂಡಿದ್ದ. ಇದೀಗ ಓದು ಮುಗಿದು ಉದ್ಯೋಗ ಇಲ್ಲದ ಕಾರಣ ಮತ್ತೆ ನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ರವಿ ಕುಮಾರ್ ಮಾತನಾಡಿದ್ದು, ಕಳೆದ ವರ್ಷವರ್ಷದಿಂದ ಎಂ.ಕಾಂ. ಮುಗಿಸಿ ಮನೆಯಲ್ಲೇ ಕುಳಿತಿದ್ದ ನನಗೆ ಮ-ನರೇಗಾವು ಕೆಲಸದ ದಾರಿ ತೋರಿಸಿತು. ಈ ಮುಂಚೆ ರಜೆ ಅವಧಿಯಲ್ಲಿ ಕೂಲಿ ಕೆಲಸ ಮಾಡಿ ಅದರ ಹಣದಿಂದ ಕಾಲೇಜು ಶುಲ್ಕ ಕಟ್ಟಿದ್ದೆ. ಕೂಲಿ ಮೊತ್ತ ಈಗ 370 ರೂ.ಗೆ ಏರಿಕೆಯಾಗಿರುವುದು ನಮ್ಮಂತ ಯುವಕರಿಗೆ ದುಡಿಯಲು ದಾರಿ ದೀಪವಾಗಿದೆ ಎಂದರು.
ಇನ್ನು ನಂಜನಗೂಡು ತಾಲೂಕಿನ ಕುರಿಹುಂಡಿ ಗ್ರಾಮ ಪಂಚಾಯತ್ನ ಮಂಜುನಾಥ್ ಎಸ್ ಮಾತನಾಡಿ, ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯ ಕೂಲಿ ಹೆಚ್ಚಳದಿಂದಾಗಿ ದುಡಿಮೆಗೆ ನಗರ ಪ್ರದೇಶಕ್ಕೆ ಹೋಗುವುದನ್ನು ತಪ್ಪಿಸಿದೆ. ಕೂಲಿ ಮೊತ್ತವು 349 ರಿಂದ 370 ರೂಪಾಯಿಗೆ ಹೆಚ್ಚಳವಾಗಿರುವುದು ನಿಜಕ್ಕೂ ನಮಗೆ ಖುಷಿ ವಿಷಯ. ಕೂಲಿ ದರ ಏರಿಕೆಯಾಗಿರುವುದು ಇನ್ನಷ್ಟು ಕೆಲಸ ಮಾಡಲು ಪ್ರೇರೇಪಿಸಿದೆ ಎಂದು ಹೇಳಿದ್ದಾರೆ. ಕೂಲಿ ಹೆಚ್ಚಳವಾಗಿದ್ದಕ್ಕೆ ಖುಷಿಪಟ್ಟ ಕಾರ್ಮಿಕರು ವರುಣ ಗ್ರಾಮದ ರಾಜ ಎಂ ಮಾತನಾಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕೂಲಿ ಮೊತ್ತವು 349 ರೂ. ಗಳಿಂದ 370 ರೂ ಗಳಿಗೆ ಹೆಚ್ಚಳವಾಗಿರುವುದು ದುಡಿಯಲು ಮತ್ತಷ್ಟು ಉತ್ಸಾಹ ತಂದಿದೆ. ನೂರು ದಿನಗಳ ಕಾಲ ದೊರಕುವ ಕೆಲಸವು ನನ್ನ ಉದ್ಯೋಗ ಕೊರತೆಯನ್ನು ತಪ್ಪಿಸಿದೆ. ಕೃಷಿ ಕೆಲಸಗಳು ಮುಗಿದ ಕೂಡಲೇ ನರೇಗಾ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ. ಹೀಗಾಗಿ ವರ್ಷಪೂರ್ತಿ ದುಡಿಯುವ ಅವಕಾಶ ನನಗೆ ದೊರಕಿದೆ ಎಂದಿದ್ದಾರೆ.
ಹಾಗೆಯೇ ಹೊಸ ಪೆಂಜಳ್ಳಿ ಗ್ರಾಮದ ಮಹಿಳೆ ಸವಿತಾ ಕೂಲಿ ಹೆಚ್ಚಳದ ಬಗ್ಗೆ ಸಂತಸ ಹಂಚಿಕೊಂಡಿದ್ದು, 349 ರೂಪಾಯಿ ಕೂಲಿ ಪಡೆಯುತ್ತಿದ್ದ ಕೂಲಿ ಮೊತ್ತವನ್ನು 370 ರೂಪಾಯಿಗೆ ಏರಿಕೆ ಮಾಡಿರುವುದರಿಂದ ನಮ್ಮಂತಹ ದಿನಗೂಲಿ ನೌಕರರಿಗೆ ಆರ್ಥಿಕವಾಗಿ ಸಹಾಯವಾಗಲಿದೆ. ಇಂದಿನ ಜೀವನದಲ್ಲಿ ಪ್ರತಿಯೊಂದು ವಸ್ತುವು ದುಬಾರಿಯಾಗಿದೆ. ಹಾಲು, ದಿನಸಿ ಮತ್ತು ತರಕಾರಿಯಂತಹ ಪ್ರತಿಯೊಂದು ವಸ್ತುವು ದುಬಾರಿಯಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಕೂಲಿ ದರ ಹೆಚ್ಚಳ ಮಾಡಿರುವುದು ಸಂತಸ ತರಿಸಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. ಹೆಚ್.ಡಿ.ಕೋಟೆ ತಾಲೂಕಿನ ನಾಗನಹಳ್ಳಿ ಗ್ರಾ.ಪಂನ ಮೊತ್ತ ಗ್ರಾಮದ ಸ್ವಾಮಿ ಮಾತನಾಡಿದ್ದು, ಕೂಲಿ ಹೆಚ್ಚಳದಿಂದ ಕೆಲಸ ಮಾಡುವ ನಮ್ಮಂತವರಿಗೆ ಪ್ರಯೋಜನವಾಗಿದೆ ಎಂದರೆ, ಹಂಪಾಪುರದ ಪಾರ್ವತಮ್ಮ ಸದ್ಯ ಕೂಲಿ ಹೆಚ್ಚಳದಿಂದ ನಮಗೆ ಮತ್ತಷ್ಟು ಬಲ ಬಂದಿದೆ. ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಜನರ ಪರವಾಗಿ ಇಂತಹ ಮತ್ತಷ್ಟು ನಿರ್ಧಾರ ಕೈ ಗೊಂಡರೆ ನಮ್ಮ ಬದುಕು ಹಸನಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಮೊದಲೆಲ್ಲಾ ಕಡಿಮೆ ಕೂಲಿ ಆಗಿದ್ದರಿಂದ ಕೂಲಿಗೆ ಹೋಗಲು ಬೇಸರವಾಗಿ ಸಾಕಷ್ಟು ದಿನ ಕೂಲಿಗೆ ಹೋಗಿರಲಿಲ್ಲ. ಪರ್ಯಾಯವಾಗಿ ಗಾರೆ ಕೆಲಸ ಸೇರಿ ಇನ್ನಿತರ ಕೆಲಸದತ್ತ ಮುಖ ಮಾಡಿದ್ದೆನು. ಇಂತಹ ಸಂದರ್ಭದಲ್ಲಿ 349 ಕೂಲಿಯನ್ನು 370ಕ್ಕೆ ಏರಿಕೆ ಮಾಡಿರುವುದರಿಂದ ನಮಗೆ ಆರ್ಥಿಕ ಬಲ ಹೆಚ್ಚಿದಂತ್ತಾಗಿದೆ. ಉದ್ಯೋಗಕ್ಕಾಗಿ ಬೇರೆಡೆಗೆ ಹೋಗುವುದು ತಪ್ಪಿ ನಮ್ಮೂರಿನ ಕೂಲಿಗೆ ಮರಳಲು ದಾರಿಯಾಗಿದೆ ಎಂದು ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೇಲಾಳು ಗ್ರಾ.ಪಂನ ಹೀನಾ ಹೇಳಿದ್ದು, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕೂಲಿ ದರ ಏರಿಕೆ ಮಾಡಿದ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.