ಮೈಸೂರು || ಡಿ.23ರಂದು ರಾಜ್ಯಮಟ್ಟದ ರೈತರ ಸಮಾವೇಶ: ರೈತರ ಹಕ್ಕೊತ್ತಾಯಗಳು ಏನು?

ಮೈಸೂರು || ಡಿ.23ರಂದು ರಾಜ್ಯಮಟ್ಟದ ರೈತರ ಸಮಾವೇಶ: ರೈತರ ಹಕ್ಕೊತ್ತಾಯಗಳು ಏನು?

ಮೈಸೂರು: ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಡಿಸೆಂಬರ್ 23ರಂದು ರೈತರ ರಾಜ್ಯಮಟ್ಟದ ಸಮಾವೇಶ ಆಯೋಜನೆ ಮಾಡಲಾಗಿದೆ. ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಸಮಾವೇಶ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ಈವರಗೆ ಪೂರ್ವಭಾವಿಯಾಗಿ ನಡೆದ ಸಭೆಗಳಲ್ಲಿ ಒಂದಷ್ಟು ಗಂಭೀರ ವಿಚಾರಗಳನ್ನು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸಮಾವೇಶದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಮಾತ್ರವಲ್ಲ ಈ ಕುರಿತು ತಾರ್ಕಿಕ ಹೋರಾಟ ರೂಪಿಸಲಾಗುವುದು. ರೈತರು ಸ್ವಾಭಿಮಾನಿಗಳಾಗಿ ಸ್ವಯಂ ಪ್ರೇರಿತರಾಗಿ ರೈತರ ಹಬ್ಬ ಆಚರಿಸಲು ಮೈಸೂರಿಗೆ ಬರಬೇಕು. ರೈತರ ಕೂಗು ಸರ್ಕಾರಕ್ಕೆ ಮುಟ್ಟಿಸಲು ಇದು ಸರಿಯಾದ ಸಮಯ ಆಗಿದೆ ಎಂದು ಹೇಳಿದರು.

ರೈತರ ಹಕ್ಕೊತ್ತಾಯಗಳು ಏನು? ಕೃಷಿ ಸಾಲ ನೀತಿ ಬದಲಾಗಿ ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಸಾಲ ನೀಡುವಂತಾಗಬೇಕು. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಕಾಯ್ದೆ ರದ್ದಾಗಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು. ಕೃಷಿ ಉಪಕರಣಗಳು, ರಸಗೊಬ್ಬರ ಕೀಟನಾಶಕ, ಮೊಸರು, ಮಜ್ಜಿಗೆ ಇತರೆ ಉತ್ಪನ್ನಗಳ ಮೇಲೆ ವಿಧಿಸಿರುವ ಜಿಎಸ್ಟಿ ಸುಂಕ ರದ್ದಾಗಬೇಕು. ಮಹಿಳಾ ಸಂಘಗಳಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್ ಕಿರುಕುಳ ನಿಲ್ಲಿಸಲು ಕಠಿಣ ಕಾನೂನು ಜಾರಿಯಾಗಬೇಕು.

ಕೃಷಿ ಮೇಳಗಳ ಬದಲು ರೈತರ ನೆನಪಿನ ಹಬ್ಬದ ದಿನಾಚರಣೆ ಆಗಬೇಕು. ಕೃಷಿ ಭೂಮಿ, ನೀರು ಅರಣ್ಯ, ಪರಿಸರ ರಕ್ಷಿಸಲು ಜಲಾಶಯಗಳ, ಕೆರೆ ಕಟ್ಟೆಗಳ ಹೂಳು ತೆಗೆಸಲು ಕಾರ್ಯ ಯೋಜನೆ ಜಾರಿಯಾಗಬೇಕು. ಪರಿಸರ ಸಂರಕ್ಷಿಸಲು ಸಾವಿರಾರು ಮರ ಬೆಳೆಸಿದ ಕಂಪನಿ, ಸಂಸ್ಥೆಗಳಿಗೆ ಶೇ.25 ತೆರಿಗೆ ವಿನಾಯಿತಿ ನೀಡುವಂತಾಗಬೇಕು. ಕಬ್ಬಿನ ಎಫ್ಆರ್ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡುವ ಮಾನದಂಡ ಜಾರಿಯಾಗಬೇಕು.

ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸುವ ಸಕ್ಕರೆ ಕಾರ್ಖಾನೆಗಳ ಮೋಸ ತಪ್ಪಿಸಲು ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬರಬೇಕು. ಫಸಲ್ ಭೀಮಾ ಬೆಳೆ ವಿಮಾ ಪದ್ಧತಿ ನೀತಿ ಬದಲಾಗಿ ಪ್ರತಿ ರೈತನ ಹೊಲದ ಬೆಳೆ ವಿಮೆ ನಷ್ಟ ಪರಿಹಾರ ಸಿಗುವಂತಾಗಬೇಕು ಎನ್ನುವುದು ರೈತರ ಹಕ್ಕೊತ್ತಾಯಗಳಾಗಿದೆ.

Leave a Reply

Your email address will not be published. Required fields are marked *