ಮೈಸೂರು || ಮೈಸೂರಿನ ಸಿಲ್ಕ್ ಫ್ಯಾಕ್ಟರಿ ಗುತ್ತಿಗೆ ನೌಕರರು ಆತಂಕಗೊಂಡಿದ್ದೇಕೆ?

ಮೈಸೂರು || ಮೈಸೂರಿನ ಸಿಲ್ಕ್ ಫ್ಯಾಕ್ಟರಿ ಗುತ್ತಿಗೆ ನೌಕರರು ಆತಂಕಗೊಂಡಿದ್ದೇಕೆ?

ಮೈಸೂರು : ಮೈಸೂರಿನ ಹೆಮ್ಮೆಯಾಗಿರುವ ಮೈಸೂರಿನ ಸಿಲ್ಕ್ ಫ್ಯಾಕ್ಟರಿಯಲ್ಲಿ ಇದೀಗ ಗೊಂದಲಗಳು ಏದ್ದಿವೆ. ಮಹಿಳೆಯರು ಇಷ್ಟಪಟ್ಟು ಉಡುವ ಸೀರೆಗಳನ್ನು ನೇಯುತ್ತಿದ್ದ ಗುತ್ತಿಗೆ ಕಾರ್ಮಿಕರು ಅತಂತ್ರರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಎಲ್ಲ ಉದ್ಯೋಗ ರಂಗದಲ್ಲಿಯೂ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ಕೆಲಸಕ್ಕೆ ನೇಮಕಮಾಡಿಕೊಳ್ಳಲಾಗುತ್ತಿದ್ದು ಅದರಂತೆ ಇಲ್ಲಿಯೂ ನೌಕರರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಆದರೆ ಟೆಂಡರ್ ಬದಲಾವಣೆಯಾಗಿರುವ ಹಿನ್ನಲೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ನೌಕರರ ಸ್ಥಿತಿ ಅರ್ಧ ಚಂದ್ರವಾಗಿದೆ.

ಟೆಂಡರ್ ಬದಲಾವಣೆ ಆಗಿರುವ ಕಾರಣದಿಂದ ಏಪ್ರಿಲ್ 1ರಂದು ಕೆಲಸಕ್ಕೆ ಬಾರದಂತೆ ಅಧಿಕಾರಿಗಳು ನೌಕರರಿಗೆ ತಿಳಿಸಿದ್ದರು. ಇದರಿಂದ ನೌಕರರಲ್ಲಿ ಆತಂಕ ಶುರುವಾಗಿತ್ತು. ಸದ್ಯ ಗುತ್ತಿಗೆ ನೌಕರರಾಗಿ ಸುಮಾರು ಎಂಟು ನೂರು ಮಂದಿ ಕಾರ್ಯ ನಿರ್ವಹಿಸುತ್ತಿದ್ದು ಅವರ ಬದುಕು ಡೋಲಾಯಮಾನವಾಗುವ ಆತಂಕ ಎದುರಾಗಿದೆ. ಕೆಲಸ ನಂಬಿ ಜೀವನ ಸಾಗಿಸುತ್ತಿದ್ದೆವು ಆದರೀಗ ರಜೆ ಪಡೆಯುವಂತೆ ಸೂಚಿಸಿರುವುದರಿಂದ ಆತಂಕ ಶುರುವಾಗಿದೆ ಎಂದು ನೌಕರರು ಅಳಲು ತೋಡಿಕೊಳ್ಳುತ್ತಿದ್ದಾರೆ.

ನಾಲ್ಕು ವರ್ಷದ ಅವಧಿಗೆ ಟೆಂಡರ್ ನೀಡಲಾಗಿತ್ತು. ಇದೀಗ ಆ ಅವಧಿ ಮುಗಿದಿರುವುದರಿಂದ ಬೇರೆಯವರು ಪಡೆದುಕೊಳ್ಳಲಿದ್ದು, ಇದರಿಂದ ಗ್ರ್ಯಾಜುಯಿಟಿ, ಸೇವಾವಧಿ ಕಡಿತಗೊಳ್ಳುವ ಭಯ ನೌಕರರನ್ನು ಆವರಿಸಿದೆ. ಹೀಗಾಗಿ ಅವರು ಪ್ರತಿಭಟನೆಯನ್ನೂ ಮಾಡಿದ್ದಾರೆ. ಸದ್ಯ ಮೈಸೂರು, ಟಿ.ನರಸೀಪುರ, ಚನ್ನಪಟ್ಟಣದ ಸಿಲ್ಕ್ ಫ್ಯಾಕ್ಟರಿಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು ಇವರೆಲ್ಲರಲ್ಲೂ ಆತಂಕ ಆವರಿಸಿದೆ. ಈಗಾಗಲೇ ಫ್ಯಾಕ್ಟರಿ ಎದುರು ಕೆಎಸ್ಐಸಿ ಹೊರಗುತ್ತಿಗೆ ಮತ್ತು ಇತರೆ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿದ್ದು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಕೆಎಸ್ಐಸಿ ಹೊರಗುತ್ತಿಗೆ ನೌಕರರ ಸಂಘ ಹೇಳುವುದೇನು? ಈ ಸಂಬಂಧ ಮಾತನಾಡಿರುವ ಸಂಘದ ಅಧ್ಯಕ್ಷ ವಿಜೇಂದ್ರ.ಬಿ, ಪ್ರಧಾನ ಕಾರ್ಯದರ್ಶಿ ಅನಿಲ್ಕುಮಾರ್.ಎಂ, ಕಾರ್ಯದರ್ಶಿ ಎಂ.ನಾಗೇಶ್, ಜಂಟಿ ಕಾರ್ಯದರ್ಶಿ ಎಸ್.ಧನರಾಜು, ಖಜಾಂಚಿ ರವಿನಂದನ್.ಎಂ.ಪಿ, ಓಂಕಾರ್ ಪ್ರಸಾದ್ ಅವರು ಕೆಎಸ್ಐಸಿಯ ವಿವಿಧ ಘಟಕಗಳಲ್ಲಿ 815ಕ್ಕೂ ಹೆಚ್ಚು ಕಾರ್ಮಿಕರು ಹೊರಗುತ್ತಿಗೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗುತ್ತಿಗೆ ಏಜೆನ್ಸಿ, ಕೆಎಸ್ಐಸಿ ಆಡಳಿತ ಮಂಡಳಿ ಶಾಸನಾತ್ಮಕ ಸೌಲಭ್ಯಗಳಾದ ಕನಿಷ್ಠ ಕೂಲಿ, ಗಳಿಕೆ ರಜಾ, ಒಟಿ ಕೆಲಸಕ್ಕೆ ದುಪ್ಪಟ್ಟು ಕೂಲಿ ನೀಡದೆ ವಂಚಿಸುತ್ತಿದೆ.

ಈ ಸಂಬಂಧ ಮೈಸೂರಿನ ರೇಷ್ಮೆ ನೇಯ್ಗೆ ಕಾರ್ಖಾನೆ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಲ್ಕ್ ವೀವಿಂಗ್ ಫ್ಯಾಕ್ಟರಿ ಎಂಪ್ಲಾಯಿಸ್ ಯೂನಿಯನ್ (ಐಎನ್ಟಿಯುಸಿ) 2023ರ ಡಿ.4ರಂದು ಸಹಾಯಕ ಕಾರ್ಮಿಕ ಆಯುಕ್ತರಿಗೆ ಲಿಖಿತ ದೂರು ನೀಡಿತ್ತು. ದೂರಿನ ಸಂಬಂಧ ಹಿರಿಯ ಕಾರ್ಮಿಕ ನಿರೀಕ್ಷಕರು ಡಿ.7ರಂದು ಕಾರ್ಖಾನೆಗೆ ಭೇಟಿ ನೀಡಿ, ಸೂಕ್ತ ನಡೆಸಿ ಸಹಾಯಕ ಕಾರ್ಮಿಕ ಆಯುಕ್ತರಿಗೆ ನಿರೀಕ್ಷಣಾ ಟಿಪ್ಪಣೆ ನೀಡಿದ್ದರು. ಬಳಿಕ ಆಡಳಿತ ಮಂಡಳಿಯವರಿಗೆ ಕಾರ್ಮಿಕ ಕಾಯ್ದೆಗಳ ಉಲ್ಲಂಘನೆ ಸಂಬಂಧ ನೋಟೀಸ್ ಜಾರಿಗೊಳಿಸಿದ್ದರೂ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ ಇದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಾನುಸಾರ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಲಿಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿ, ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸುವಂತೆ ಸೂಚಿಸಿರುವ ಹೊರತಾಗಿಯೂ ಕೆಎಸ್ಐಸಿಯಲ್ಲಿ 50ಕ್ಕೂ ಹೆಚ್ಚಿನ ಅಧಿಕಾರಿಗಳನ್ನು ಸೇವೆಯಲ್ಲಿ ಮುಂದುವರೆಸಲಾಗಿದೆ.

ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದ್ದೇನು? ವಿಷಯ ತಿಳಿದು ಮೈಸೂರಿನ ಸಿಲ್ಕ್ ಫ್ಯಾಕ್ಟರಿಗೆ ಭೇಟಿ ನೀಡಿದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಪ್ರತಿಭಟನಾಕಾರರಿಂದ ಮಾಹಿತಿ ಪಡೆದು ಬಳಿಕ ಮಾತನಾಡಿ, ಕೆಎಸ್ಐಸಿ ಹೊರಗುತ್ತಿಗೆಯ 800ನೌಕರರನ್ನು ಬುಧವಾರದಿಂದ ಕೆಲಸಕ್ಕೆ ಬನ್ನಿ ಎಂದು ಆಡಳಿತ ಮಂಡಳಿ ಹೇಳಿದ್ದರಿಂದ ಆತಂಕಗೊಂಡ ನೌಕರರು ಪ್ರತಿಭಟನೆ ಮಾಡಿದ್ದಾರೆ. ಗುತ್ತಿಗೆದಾರರು ಬದಲಾದ್ದರಿಂದ ಏ.2ರಿಂದ ಬರುವಂತೆ ತಿಳಿಸಿ ಗೇಟ್ಗೆ ಬೀಗ ಹಾಕಿದ್ದರು. ಇದರಿಂದ ನೌಕರರು ಸರ್ವೀಸ್ ಪರಿಗಣಿಸುವುದಿಲ್ಲ, ಹಳೆಯ ವೇತನ ಕೊಡುವುದಿಲ್ಲ ಎಂದು ಆತಂಕಗೊಡ್ಡಿದ್ದರು. ಆದರೆ ಆತಂಕ ಪಡಬೇಕಾಗಿಲ್ಲ ಸರ್ವಿಸ್, ಸಂಬಳ ಎಲ್ಲವೂ ಹಳೆಯದೇ ಇರಲಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

Leave a Reply

Your email address will not be published. Required fields are marked *