Navratri 2025 Day 1: ಶೈಲಪುತ್ರಿ ದೇವಿಯ ಆರಾಧನೆಯಿಂದ ಶುಭಾರಂಭ – ಪೂಜಾ ವಿಧಾನ, ಪುರಾಣ ಕಥೆ, ಮಂತ್ರಗಳ ಮಾಹಿತಿ ಇಲ್ಲಿದೆ!

Navratri 2025 Day 1: ಶೈಲಪುತ್ರಿ ದೇವಿಯ ಆರಾಧನೆಯಿಂದ ಶುಭಾರಂಭ – ಪೂಜಾ ವಿಧಾನ, ಪುರಾಣ ಕಥೆ, ಮಂತ್ರಗಳ ಮಾಹಿತಿ ಇಲ್ಲಿದೆ!

ನವರಾತ್ರಿಯ ಮೊದಲ ದಿನವಾದ ಶೈಲಪುತ್ರಿಯ ಆರಾಧನೆಯ ಮಹತ್ವ ಮತ್ತು ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ. ಶೈಲಪುತ್ರಿ ಅಂದರೆ ಪರ್ವತ ರಾಜನ ಮಗಳು, ಪಾರ್ವತಿ ಎಂದರ್ಥ.ಶೈಲಪುತ್ರಿಯು ವೃಷಭವನ್ನು ಏರಿ ಬರುತ್ತಾಳೆ ಮತ್ತು ಆ ದೇವಿಯ ಎಡಗೈಯಲ್ಲಿ ಕಮಲ, ಬಲಗೈಯಲ್ಲಿ ತ್ರಿಶೂಲ ಇರುತ್ತದೆ. ಆಕೆಯ ಪೂಜೆಯಿಂದ ಶಕ್ತಿ ಮತ್ತು ಶಾಂತಿಯ ಸಮತೋಲನ ಸಾಧ್ಯ. ಪೂಜಾ ವಿಧಾನ ಮತ್ತು ಮಂತ್ರವನ್ನು ಸಹ ಇಲ್ಲಿ ತಿಳಿಸಲಾಗಿದೆ.

ಜನರ ದುಃಖಗಳನ್ನು ದೂರ ಮಾಡಿ, ಭಯಹರಣ ಮಾಡುವ ತಾಯಿಯ ಆರಾಧನೆಯೆ ನವರಾತ್ರಿ. ಈ ವರ್ಷದ, ಶಾರದೀಯ ನವರಾತ್ರಿಯನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರಂದು ವಿಜಯದಶಮಿಯವರೆಗೆ ಆಚರಿಸಲಾಗುತ್ತದೆ. ನವರಾತ್ರಿಯಲ್ಲಿ ಆ ಜಗನ್ಮಾತೆಯನ್ನು ಆರಾಧಿಸುವ ಒಂಬತ್ತು ಸ್ವರೂಪಗಳಲ್ಲಿ ಮೊದಲನೆಯದು ಶೈಲಪುತ್ರಿ. ಆಶ್ವಯುಜ ಮಾಸದ ಶುಕ್ಲ ಪ್ರತಿಪದೆಯಿಂದ ಪ್ರಾರಂಭವಾಗಿ ನವಮಿ ತನಕ ತಾಯಿ ನವರೂಪಗಳಲ್ಲಿ ಪೂಜಿಸಲ್ಪಡುವ ಈ ಮಹೋತ್ಸವವು ಭಕ್ತರಿಗೆ ಪರಮ ಶಾಂತಿ ಹಾಗೂ ಅಭಯವನ್ನು ನೀಡುತ್ತದೆ. ದುಷ್ಟರ ಸಂಹಾರ ಮಾಡಿ, ಸಜ್ಜನರ ಉದ್ಧಾರ ಮಾಡುವ ನವರಾತ್ರಿಯ ಒಂಬತ್ತು ಸ್ವರೂಪಗಳಲ್ಲಿ ಮೊದಲನೆಯದಾಗಿ ಶೈಲಪುತ್ರಿ ಆರಾಧನೆ.

ಶೈಲಪುತ್ರಿಯ ಮಂತ್ರ:

ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್ ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ

ಶೈಲಪುತ್ರಿಯ ಸ್ವರೂಪ:

ಶೈಲಪುತ್ರಿ ಎಂದರೆ ಪರ್ವತದ ಪುತ್ರಿ. ಹಿಮಾಲಯನ ಮಗಳು ಪಾರ್ವತಿ ಈ ಸ್ವರೂಪದಲ್ಲಿ ಪೂಜಿಸಲ್ಪಡುತ್ತಾಳೆ. ವೃಷಭ ವಾಹನವಾಗಿ, ಎಡಗೈಯಲ್ಲಿ ಕಮಲ ಹಾಗೂ ಬಲಗೈಯಲ್ಲಿ ತ್ರಿಶೂಲವನ್ನು ಹಿಡಿದಿರುವುದು ಆಕೆಯ ದಿವ್ಯ ಚಿಹ್ನೆಗಳು. ಈ ರೂಪವು ಶಕ್ತಿ ಮತ್ತು ಶಾಂತಿಯ ಸಮತೋಲನವನ್ನು ತೋರಿಸುತ್ತದೆ.

ಶೈಲಪುತ್ರಿಯ ಪುರಾಣದ ಕಥೆ:

ವಿಷ್ಣುವಿನ ನಾಭಿ ಕಮಲದಲ್ಲಿ ನೆಲೆಸಿದ ಬ್ರಹ್ಮನು ಸೃಷ್ಟಿ ಕಾರ್ಯದಲ್ಲಿದ್ದಾಗ ಮಧು–ಕೈಟಭ ಎಂಬ ರಾಕ್ಷಸರು ಅವನಿಗೆ ಅಡ್ಡಿ ತರುತ್ತಾರೆ. ಮಹಾವಿಷ್ಣು ಯೋಗನಿದ್ರೆಯಲ್ಲಿ ಇರುವುದರಿಂದ ಬ್ರಹ್ಮನ ಪ್ರಾರ್ಥನೆ ಫಲಿಸಲಿಲ್ಲ. ಆಗ ಬ್ರಹ್ಮನು ಯೋಗನಿದ್ರಾರೂಪಿಣಿ ದೇವಿಯನ್ನು ಪ್ರಾರ್ಥಿಸಿದನು. ತಾಯಿ ಪ್ರಸನ್ನಳಾಗಿ ವಿಷ್ಣುವನ್ನು ಎಬ್ಬಿಸಿದಳು. ವಿಷ್ಣುವು ಜಾಗೃತನಾಗಿ ಆ ರಾಕ್ಷಸರನ್ನು ಸಂಹರಿಸಿದನು. ಹೀಗಾಗಿ ನವರಾತ್ರಿಯ ಮೊದಲ ದಿನ ಶೈಲಪುತ್ರಿ ಅಥವಾ ಯೋಗನಿದ್ರಾ ಸ್ವರೂಪದ ಆರಾಧನೆ ಮಾಡಬೇಕು. ಈ ದಿನದ ಶಕ್ತಿ–ಬಣ್ಣ ಬಿಳಿ, ಅದು ನೆಮ್ಮದಿ ಮತ್ತು ಶುದ್ಧತೆಯನ್ನು ಸೂಚಿಸುತ್ತದೆ.

ಮಧು ಮತ್ತು ಕೈಟಭದ ತಾತ್ಪರ್ಯ:

ಇವರನ್ನು ಕೇವಲ ದೈತ್ಯರೆಂದು ನೋಡುವುದರಿಂದ ಮೀರಿ, ಮಾನವ ಜೀವನದಲ್ಲಿಯೇ ಪ್ರತಿಬಿಂಬಿಸುವ ದುರ್ಗುಣಗಳೆಂದು ತಿಳಿಯಬಹುದು. ಮಧು ಅಂಟುವ ಗುಣ, ಭೋಗಗಳಿಗೆ ಬದ್ಧತೆಯನ್ನು ಸೂಚಿಸುತ್ತದೆ. ಕೈಟಭ ಹುಳುವಿನಂತೆ ನಾಶಮಾಡುವ ಗುಣವನ್ನು ಪ್ರತಿನಿಧಿಸುತ್ತದೆ. ಈ ದೋಷಗಳನ್ನು ದೂಡಲು ಶೈಲಪುತ್ರಿಯ ಧ್ಯಾನ ಅಗತ್ಯ.

ಪೂಜಾ ವಿಧಾನ:

ಬೆಳಗಿನ ಶುದ್ಧಸ್ನಾನದ ನಂತರ ಮನೆಯ ಈಶಾನ್ಯದಲ್ಲಿ ಅಥವಾ ದೇವಾಲಯದಲ್ಲಿ ರಂಗೋಲಿ ಹಾಕಿ, ಅಷ್ಟದಳ ಚಿತ್ರಿಸಿ ಅದರ ಮೇಲೆ ಕಲಶವನ್ನು ಸ್ಥಾಪಿಸಬೇಕು. ಕಲಶದಲ್ಲಿ ಗಂಧ ಮತ್ತು ಶುದ್ಧ ಜಲವನ್ನು ತುಂಬಿ, ತಾಯಿಯ ಆವಾಹನೆ ಮಾಡಬೇಕು. ಪ್ರತಿದಿನ ವಿಭಿನ್ನ ಸ್ವರೂಪದಲ್ಲಿ ಆರಾಧನೆ ನಡೆಸಿ ನವರಾತ್ರಿ ಪೂರೈಸುವುದು ಶ್ರೇಷ್ಠ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *