ದಾವಣಗೆರೆ: ಮಾಜಿ ಸಿಎಂ ಯಡಿಯೂರಪ್ಪನವರನ್ನು ನೇರವಾಗಿ ಬಂಧಿಸಿದರೆ ಕೆಟ್ಟ ಹೆಸರು ಬಂದು ಸರ್ಕಾರ ಪತನವಾಗುತ್ತದೆ ಎಂಬ ಭಯದಿಂದ ಕೋರ್ಟ್ ಮೂಲಕ ಬಂದಿದ್ದೀರಿ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈತ ನಾಯಕ ಯಡಿಯೂರಪ್ಪನವರ ಮೇಲೆ ಪೋಕ್ಸೋ ಪ್ರಕರಣ ದಾಖಲು ಮಾಡಿದ್ದರು. ಅಂದು ಗೃಹ ಸಚಿವರು ದೂರು ನೀಡಿದಾಕೆ ಮಾನಸಿಕ ಅಸ್ವಸ್ಥೆ, 53 ಜನರ ಮೇಲೆ ದೂರು ನೀಡಿದ್ದಾರೆ ಎಂದು ಹೇಳಿದ್ದರು. ಯಡಿಯೂರಪ್ಪನವರನ್ನು ಭೇಟಿಯಾಗಿ ನನ್ನ ಮಗಳಿಗೆ ನ್ಯಾಯ ಕೊಡಿಸಿ ಎಂದು ಅವರ ಬಳಿ ಹೋಗಿದ್ದಳು.
ತನ್ನ ಸಹೋದರ ಸಂಬಂಧಿ ನನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಯಡಿಯೂರಪ್ಪನವರ ಬಳಿ ಹೇಳಿ ಗೋಳಾಡಿದ್ದಳು. ಐದು ಸಾವಿರ ಕೋಟಿ ರೂ ಬಜಾಜ್ ಕಂಪನಿಯವರು ನೀಡಬೇಕು, ಕೊಡಿಸಿ ಎಂದು ಹೇಳಿದ್ದಳು. ಅಂದು ಮಾನಸಿಕ ಅಸ್ವಸ್ಥೆ ಎಂದು ಹೇಳಿ ಈಗ ಯಡಿಯೂರಪ್ಪನವರನ್ನು ಬಂಧಿಸುತ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ. ಈ ಪ್ರಕರಣ ರಾಜಕೀಯ ಪ್ರೇರಿತ ಎಂದರು.