ನವದೆಹಲಿ: ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವರಾದ ಜನಾರ್ದನ್ ರೆಡ್ಡಿ ಅವರು ಈ ಹಿಂದೆ ಜೈಲು ಶಿಕ್ಷೆಯನ್ನ ಅನುಭವಿಸಿದ್ದು, ಇದೀಗ ಮತ್ತೆ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಪರಾಧಿ ಎಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ.

ಓಬಳಾಪುರಂ ಮೈನಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದ ಬಿ.ವಿ.ಶ್ರೀನಿವಾಸರೆಡ್ಡಿ ಮತ್ತು ಓಬಳಾಪುರಂ ಮೈನಿಂಗ್ ಕಂಪನಿಯ ಮುಖ್ಯಸ್ಥನಾಗಿದ್ದ ಜನಾರ್ದನ ರೆಡ್ಡಿ ಅಪರಾಧಿ ಎಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಮತ್ತೆ ಗಾಲಿ ಜನಾರ್ದನ್ ರೆಡ್ಡಿ ಅವರಿಗೆ ಬರೋಬ್ಬರಿ ಏಳು ವರ್ಷಗಳ ಕಾಲ ಜೈಲು ಶಿಕ್ಷೆಯನ್ನ ನ್ಯಾಯಾಲಯ ವಿಧಿಸಿದೆ. ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಶಿಕ್ಷೆಯನ್ನ ಕಡಿಮೆ ಮಾಡಿ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮನವಿ ಮಾಡಿದ್ದಾರೆ.
ದಯವಿಟ್ಟು ಶಿಕ್ಷೆಯ ಪ್ರಮಾಣವನ್ನ ಕಡಿಮೆ ಮಾಡಿ. ಬಳ್ಳಾರಿ ಹಾಗೂ ಗಂಗಾವತಿ ಜನ ನನ್ನ ಆಯ್ಕೆ ಮಾಡಿದ್ದಾರೆ. ಸಾರ್ವಜನಿಕರಿಂದ ನನಗೆ ಸಿಗುವ ಬೆಂಬಲವು ಆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಾನು ಸಾರ್ವಜನಿಕ ಸೇವೆಗೆ ಸಮರ್ಪಿತನಾಗಿದ್ದೇನೆ. ನಾನು ನಾಲ್ಕು ವರ್ಷ ಜೈಲಿನಲ್ಲಿ ಕಳೆದಿದ್ದೇನೆ, ದಯವಿಟ್ಟು ಶಿಕ್ಷೆಯ ಪ್ರಮಾಣವನ್ನ ಕಡಿಮೆ ಮಾಡಿ ಎಂದು ಜಡ್ಜ್ ಎದುರು ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರು ಅಂಗಲಾಚಿದ್ದಾರೆ. ಇನ್ನೂ ಜನಾರ್ದನ್ ರೆಡ್ಡಿ ಅವರ ಮನವಿಯನ್ನ ತಿರಸ್ಕರಿಸಿದ ನ್ಯಾಯಾಲಯ, ಜನಾರ್ದನ ರೆಡ್ಡಿ ಜೀವಾವಧಿ ಶಿಕ್ಷೆಗೂ ಅರ್ಹರು, ನಿಮಗೆ 10 ವರ್ಷ ಜೈಲು ಶಿಕ್ಷೆ ಯಾಕೆ ಕೊಡಬಾರ್ದು ಎಂದು ರೆಡ್ಡಿ ಅವರನ್ನ ತರಾಟೆಗೆ ತೆಗೆದುಕೊಂಡಿದೆ.