ಬೆಂಗಳೂರು: 2024ರ ಕರ್ನಾಟಕ ಉಪ ಚುನಾವಣೆಯಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ವಿರುದ್ಧ ಸೋಲು ಕಂಡಿದ್ದಾರೆ. ಈ ಹಿಂದೆ ಸತತ ಎರಡು ಚುನಾವಣೆಗಳಲ್ಲಿ ಸೋಲು ಅನುಭವಿಸಿದ್ದ ನಿಖಿಲ್ ಈ ಬಾರಿಯೂ ಸೋಲುಕಂಡಿದ್ದಾರೆ.
ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ನಿಖಿಲ್ಗೆ ಚುನಾವಣಾ ಕುರುಕ್ಷೇತ್ರದಲ್ಲಿ ಅಭಿಮನ್ಯು ಪಾತ್ರವೇ ಆಗಿದೆ. ನಾವು ಅರ್ಜುನ ಪಾತ್ರಕ್ಕೆ ಹೋಗುತ್ತಾರೆ ಅಂತಾ ತಿಳಿದುಕೊಂಡಿದ್ದೇವು. ಮತ್ತೆ ಅಭಿಮನ್ಯು ಪಾತ್ರದಲ್ಲಿ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸೋಲಿನಿಂದ ಬಹಳ ನೋವಾಗುತ್ತಿದೆ. ಅವರು ಗೆಲ್ಲಬೇಕಿತ್ತು ಎಂದರು.
ಪ್ರಾಮಾಣಿಕ ಯುವಕ ನಿಖಿಲ್ ಗೆಲ್ಲ ಬೇಕಾಗಿತ್ತು. ಸೋಲೇ ಗೆಲುವಿನ ಹಾದಿ, ಮುಂದೆ ಅವಕಾಶ ಇದ್ದೇ ಇರುತ್ತದೆ. ಮುಂದೆಯಾದರು ದೇವರು ನಿಖಿಲ್ ಕುಮಾರಸ್ವಾಮಿಗೆ ಒಳ್ಳೆಯ ಅವಕಾಶ ಕೊಡುತ್ತಾನೆ ಎನ್ನುವು ವಿಶ್ವಾಸ ಇದೆ ಎಂದು ಆರ್ ಅಶೋಕ್ ಹೇಳಿದ್ದಾರೆ.
ಇನ್ನು ಶಿಗ್ಗಾವಿಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ಇತ್ತು. ಸಮೀಕ್ಷೆಗಳು ಕೂಡ ಹಾಗೇ ಬಂದಿತ್ತು. ಸಮೀಕ್ಷೆ ಪ್ರಕಾರ ನಾವು ಮಹಾರಾಷ್ಟ್ರ, ಜಾರ್ಖಾಂಡ್ ಚುನಾವಣೆ ಗೆದ್ದಿದ್ದೇವೆ. ದೇಶದ ದೃಷ್ಟಿಯಿಂದ ಒಳ್ಳೆಯದೇ ಆಗಿದೆ. ಆದರೆ ರಾಜ್ಯದಲ್ಲಿ ಶಿಗ್ಗಾವಿ ಮತ್ತೆ ಚನ್ನಪಟ್ಟಣದಲ್ಲಿ ಗೊಂದಲ ಆಗಿತ್ತು. ಕೊನೆಯ ಕ್ಷಣದಲ್ಲಿ ಅಭ್ಯರ್ಥಿಯನ್ನು ಹಾಕಿದೆವು. ಇದರಿಂದ ಹಿನ್ನೆಡೆ ಆಯ್ತು ಅನಿಸುತ್ತದೆ ಎಂದರು.
ನಿಖಿಲ್ ಕುಮಾರಸ್ವಾಮಿ ಅವರು ಕೊನೆಯವರೆಗೂ ನಿಲ್ಲಲ್ಲ ಎನ್ನುತ್ತಿದ್ದರು. ಬಸವರಾಜ ಬೊಮ್ಮಾಯಿ ಅವರು ಕೂಡ ತಮ್ಮ ಮಗ ಭರತ್ ಬೊಮ್ಮಾಯಿ ನಿಲ್ಲಲ್ಲ ಎನ್ನುತ್ತಿದ್ದರು. ನಿಲ್ಲಲ್ಲ ನಿಲ್ಲ ಅಂತಾ ಹೇಳಿ ಅವರೇ ನಿಂತರು. ಜೊತೆಗೆ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಯಥೇಚ್ಛವಾಗಿ ಹಣ ಬಲ ಬಳಸಿದರು ಎಂದರು.
ಕಳೆದ ವರ್ಷದ ಲೋಕಸಭಾ ಚುನಾವಣೆಯಲ್ಲಿ ಜನ ನಮಗೆ ಬೆಂಬಲ ಕೊಟ್ಟರು. ಈ ಚುನಾವಣೆಯಲ್ಲಿ ಹಿನ್ನೆಡೆಯಾಯ್ತು. ಯಾಕೆ ಈ ರೀತಿ ಹಿನ್ನೆಡೆ ಆಯ್ತು ಎನ್ನುವುದನ್ನು ವಿಮರ್ಶಿಸುತ್ತೇವೆ. ಬೊಮ್ಮಾಯಿ ಅವರಿಗೆ ಮಗನನ್ನು ನಿಲ್ಲಿಸಲು ಇಷ್ಟ ಇರಲಿಲ್ಲ. ಈ ಬಗ್ಗೆ ನನ್ನ ಹತ್ತಿರವೂ ಮಾತನಾಡಿದ್ದರು. ಬೇಡ ಅವನನ್ನು ನಿಲ್ಲಿಸುವುದು ಅಂತಾ ಕೂಡ ಹೇಳಿದ್ದರು. ಆದರೆ ಹೈ ಕಮಾಂಡ್ ಅವರು ನಿಲ್ಲಲೇ ಬೇಕು ಬೇರೆ ಅಷ್ಟು ಸಮರ್ಥವಾದ ಅಭ್ಯರ್ಥಿ ಇಲ್ಲ ಎಂದರು. ಹೀಗಾಗಿ ಕೊನೆಯಲ್ಲಿ ಬಂದು ನಿಂತು ತಯಾರಿ ಮಾಡಿದರು ಆದರೆ ಗೆಲುವು ಸಾಧ್ಯವಾಗಲಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.