ಸಾಲ ನೀಡಲು ವಿಳಂಬ ಸಲ್ಲದು: ಕೋಟ ಶ್ರೀನಿವಾಸ ಪೂಜಾರಿ

ಸಾಲ ನೀಡಲು ವಿಳಂಬ ಸಲ್ಲದು: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಕೇಂದ್ರ ಸರ್ಕಾರದ ಯೋಜನೆಗಳಾದ ವಿಶ್ವಕರ್ಮ, ಸ್ವನಿಧಿ, ಮುದ್ರಾ ಯೋಜನೆ, ಸ್ಟಾರ್ಟ್ಅಪ್ ಮೊದಲಾದ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಲ ನೀಡಲು ಯಾವುದೇ ವಿಳಂಬ ಮಾಡುವುದು ಸರಿಯಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮಣಿಪಾಲದ ರಜತಾದ್ರಿಯ ಜಿಲ್ಲಾ ಪಂಚಾಯಿತಿ ಕಚೇರಿಯ ಡಾ.ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೇಂದ್ರ ಸರ್ಕಾರದ ಸಾಲ ಸೌಲಭ್ಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ 4,465 ಮಂದಿ ಸ್ವನಿಧಿಯ ಮೊದಲ ಹಂತದ ಸಾಲವನ್ನು ಪಡೆದಿದ್ದು, ಎರಡನೇ ಮತ್ತು ಮೂರನೇ ಹಂತದ ಸಾಲ ಸೌಲಭ್ಯಕ್ಕಾಗಿ ಕಾಯುತ್ತಿದ್ದಾರೆ. ಎರಡನೇ ಹಂತದ ಸಾಲ ಸೌಲಭ್ಯವನ್ನು 2,865 ಮಂದಿ ಪಡೆದಿದ್ದಾರೆ. ಮೂರನೇ ಹಂತದ ಸಾಲಸೌಲಭ್ಯವನ್ನು 845 ಮಂದಿ ಪಡೆದಿದ್ದಾರೆ. ಪ್ರಥಮ ಹಂತ ಪಡೆದು ಬಾಕಿ ಉಳಿದಿರುವ ಎಲ್ಲರಿಗೂ ಎರಡನೇ ಮತ್ತು ಮೂರನೇ ಹಂತದ ಸಾಲ ಸೌಲಭ್ಯವನ್ನು ನೀಡಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಸಂಸದರು ಸೂಚನೆ ನೀಡಿದರು.

ಇದೇ 8ರಂದು ರಂದು ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿರುವ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದ ಬಗ್ಗೆಯೂ ಚರ್ಚೆ ನಡೆಸಿ, ಪ್ರತಿ ಬ್ಯಾಂಕ್ಗಳಿಂದ ಕನಿಷ್ಠ 100 ಮಂದಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಈ ಕಾರ್ಯಕ್ರಮದಲ್ಲಿ ನೀಡಬೇಕೆಂದು ತಿಳಿಸಿದರು.

ಸಾಲ ನೀಡದಿದ್ದರೆ ನನ್ನನ್ನು ಸಂಪರ್ಕಿಸಿ: ಕೇಂದ್ರ ಸರ್ಕಾರದ ಯಾವುದೇ ಯೋಜನೆಗಳಿಗೆ ಸಾಲ ನೀಡಲು ಬ್ಯಾಂಕ್ಗಳು ಹಿಂಜರಿಕೆ ತೋರಿದರೆ ನನ್ನನ್ನು ಸಂಪರ್ಕಿಸಿ. ನಾನು ಬ್ಯಾಂಕ್ ಅಧಿಕಾರಿಗಳ ಜೊತೆ ಮಾತಕತೆ ನಡೆಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

8ರಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದೂ ಕೋರಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಲೀಡ್ ಬ್ಯಾಂಕ್ನ ಪ್ರಬಂಧಕ ಹರೀಶ್ ಇದ್ದರು.

Leave a Reply

Your email address will not be published. Required fields are marked *