ಬೆಂಗಳೂರು : ಉದ್ಯಾನ ನಗರಿ ಬೆಂಗಳೂರಿನ ಜನರಿಗೆ ಮಹತ್ವದ ಮಾಹಿತಿಯೊಂದಿದೆ. ಕೆಎಂಎಫ್ ತನ್ನ ‘ನಂದಿನಿ’ ಬ್ರಾಂಡ್ ದೋಸೆ ಮತ್ತು ಇಡ್ಲಿ ಹಿಟ್ಟು ಮಾರುಕಟ್ಟೆಗೆ ಬಿಡುಗಡೆ ಮಾಡುವ ಘೋಷಣೆಯನ್ನು ವಾಪಸ್ ಪಡೆದಿದೆ. ಬೆಂಗಳೂರು ನಗರದಲ್ಲಿ ಪ್ರಾಯೋಗಿಕವಾಗಿ ಇಡ್ಲಿ, ದೋಸೆ ಹಿಟ್ಟು ಮಾರಾಟ ಮಾಡಲು ಕೆಎಂಎಫ್ ಉದ್ದೇಶಿಸಿತ್ತು. ನವೆಂಬರ್ 27ರಂದು ಉತ್ಪನ್ನಗಳ ಬಿಡುಗಡೆಗೆ ದಿನಾಂಕವೂ ನಿಗದಿಯಾಗಿತ್ತು. ಆದರೆ ಬಳಿಕ ಅದನ್ನು ಮುಂದೂಡಲಾಗಿತ್ತು.
ಈಗ ನಂದಿನಿ ಬ್ರಾಂಡ್ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಬಿಡುಗಡೆ ಮಾಡುವುದಿಲ್ಲ ಎಂದು ಕೆಎಂಎಫ್ ಹೇಳಿದೆ. ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು ಕಡಿಮೆ ಬೆಲೆಯಲ್ಲಿ 900 ಗ್ರಾಂ ಮತ್ತು 450 ಗ್ರಾಂ ದೋಸೆ, ಇಡ್ಲಿ ಹಿಟ್ಟನ್ನು ಮಾರಾಟ ಮಾಡಲು ಕೆಎಂಎಫ್ ಮುಂದಾಗಿತ್ತು. ಆದರೆ ಈ ತೀರ್ಮಾನವನ್ನು ಈಗ ವಾಪಸ್ ಪಡೆಯಲಾಗಿದೆ.
ನಂದಿನಿ ಬ್ರಾಂಡ್ ದೋಸೆ, ಇಡ್ಲಿ ಹಿಟ್ಟನ್ನು ತಂದು ಮನೆಯಲ್ಲಿ ದೋಸೆ ಸವಿಯುವ ಬೆಂಗಳೂರಿನ ಜನರ ಕನಸು ಸದ್ಯಕ್ಕೆ ನನಸಾಗುವುದಿಲ್ಲ. ಈ ಕುರಿತು ಸ್ವತಃ ಕೆಎಂಎಫ್ ಅಧ್ಯಕ್ಷರು ಮಾಹಿತಿ ನೀಡಿದ್ದು, ಲಭ್ಯವಿರುವ ಖಾಸಗಿ ಕಂಪನಿಗಳ ಹಿಟ್ಟನ್ನು ತಂದು ದೋಸೆ ಮಾಡಿಕೊಂಡು ತಿನ್ನಬೇಕಾಗಿದೆ. ಏಕಾಏಕಿ ಕೆಎಂಎಫ್ನ ತೀರ್ಮಾನ ಅಚ್ಚರಿಗೆ ಕಾರಣವಾಗಿದೆ. ಕೆಎಂಎಫ್ ಅಧ್ಯಕ್ಷರ ಹೇಳಿಕೆ: ಈ ಕುರಿತು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮಾತನಾಡಿದ್ದಾರೆ. “ದೋಸೆ, ಇಡ್ಲಿ ಹಿಟ್ಟಿನ ಗುಣಮಟ್ಟ ಕಾಯ್ದುಕೊಳ್ಳದಿದ್ದರೆ ಅದರಿಂದ ನಂದಿಗೆ ಬ್ರಾಂಡ್ಗೆ ಕೆಟ್ಟ ಹೆಸರು ಬರುತ್ತದೆ. ಇದರಿಂದಾಗಿ ನಂದಿನಿ ಹಾಲು, ಹಾಲಿನ ಉತ್ಪನ್ನಗಳ ಮೇಲೆಯೂ ಪ್ರಭಾವ ಬೀರುವ ಆತಂಕವಿದೆ. ಆದ್ದರಿಂದ ನಂದಿನಿ ಬ್ರಾಂಡ್ ದೋಸೆ ಹಿಟ್ಟನ್ನು ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿದೆ” ಎಂದು ಹೇಳಿದರು. ಕೆಎಂಎಫ್ ನಂದಿನಿ ಬ್ರಾಂಡ್ ದೋಸೆ, ಇಡ್ಲಿ ಹಿಟ್ಟನ್ನು ಮಾರಾಟ ಮಾಡುವುದಾಗಿ ಹಲವು ದಿನಗಳ ಹಿಂದೆ ಹೇಳಿತ್ತು. ಪ್ರಾಯೋಗಿಕವಾಗಿ ಬೆಂಗಳೂರು ನಗರದಲ್ಲಿ ಈ ಉತ್ಪನ್ನ ಮಾರಾಟಕ್ಕೆ ಯೋಜನೆ ರೂಪಿಸಿತ್ತು. ಇದಕ್ಕಾಗಿ ಜಯನಗರಲ್ಲಿ ವ್ಯವಸ್ಥೆಯನ್ನು ಮಾಡಿಕೊಂಡಿತ್ತು. ಆದರೆ ಈಗ ಏಕಾಏಕಿ ತನ್ನ ನಿರ್ಧಾರವನ್ನು ಕೆಎಂಎಫ್ ಬದಲಿಸಿದೆ.
ಬಾಹ್ಯ ಕಂಪನಿಯೊಂದು ನಂದಿನಿ ಬ್ರಾಂಡ್ ಅಡಿ ದೋಸೆ, ಇಡ್ಲಿ ಹಿಟ್ಟನ್ನು ಮಾರಾಟ ಮಾಡಲು ಮುಂದಾಗಿತ್ತು. ಆದರೆ ಕೆಎಂಎಫ್ ಆಡಳಿತ ಮಂಡಳಿ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶವನ್ನು ಮುಂದಿಟ್ಟುಕೊಂಡು ಈ ಹಿಟ್ಟಿನ ಮಾರಾಟದಿಂದ ಹಿಂದೆ ಸರಿದಿದೆ. ಕೆಎಂಎಫ್ನ ‘ನಂದಿನಿ’ ವಿಶ್ವಪ್ರಸಿದ್ಧಿ ಪಡೆದಿರುವ ಬ್ರಾಂಡ್. ಸುಮಾರು 153 ಉತ್ಪನ್ನಗಳನ್ನು ಇದರಡಿ ಮಾರಾಟ ಮಾಡಲಾಗುತ್ತದೆ. ಕರ್ನಾಟಕ ಮಾತ್ರವಲ್ಲ ಕೆಲವು ದಿನಗಳ ಹಿಂದೆ ನವದೆಹಲಿಯ ಮಾರುಕಟ್ಟೆಗೆ ಸಹ ನಂದಿನಿ ಲಗ್ಗೆ ಇಟ್ಟಿದ್ದು, ಜನರಿಂದ ಸಹ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ದುಬೈನಲ್ಲಿ ಸಹ ಕೆಎಂಎಫ್ನ ನಂದಿನಿ ಔಟ್ಲೆಟ್ಗಳಿವೆ. ನಂದಿನಿ ಹಾಲು, ಹಾಲಿನ ಉತ್ಪನ್ನಗಳು ಕರ್ನಾಟಕದ ಹೆಮ್ಮೆ. ದೋಸೆ ಹಿಟ್ಟಿನ ಗುಣಮಟ್ಟದ ವಿಚಾರದಲ್ಲಿ ಯಾವುದೇ ಸಮಸ್ಯೆ ಉಂಟಾದರೆ ಅದು ಇತರ ಉತ್ಪನ್ನಗಳ ಮಾರಾಟದ ಮೇಲೆಯೂ ಪರಿಣಾಮ ಬೀರಲಿದೆ. ಆದ್ದರಿಂದ ದೋಸೆ ಹಿಟ್ಟಿನ ಮಾರಾಟದ ಯೋಜನೆಯನ್ನು ಕೈ ಬಿಡಲಾಗಿದೆ.
ನವೆಂಬರ್ 21ರಂದು ನಂದಿನಿ ಹಾಲು, ಹಾಲಿನ ಉತ್ಪನ್ನಗಳ ಮಾರಾಟವನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆರಂಭಿಸಲಾಗಿದೆ. ಆದರೆ ಇದಕ್ಕೆ ಅಲ್ಲಿನ ಮಾರುಕಟ್ಟೆಯಲ್ಲಿ ಅಡ್ಡಿ ಉಂಟು ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಉತ್ಪನ್ನಗಳು ಸ್ಥಳೀಯ ಗ್ರಾಹಕರ ಕೈ ಸೇರದಂತೆ ಪಿತೂರಿ ನಡೆಸಲಾಗುತ್ತಿದೆ ಎಂಬ ಆರೋಪವಿದೆ. ನಂದಿನಿ ಪೈಪೋಟಿಯನ್ನು ನಿರೀಕ್ಷೆ ಮಾಡಿರುವ ಉತ್ತರ ಭಾರತದ ಹಾಲು ಒಕ್ಕೂಟಗಳು ದೆಹಲಿಯಲ್ಲಿ ನಂದಿನಿ ಉತ್ಪನ್ನ ಜನರ ಕೈ ಸೇರದಂತೆ ಪಿಯೂರಿ ನಡೆಸಿವೆ. ಡೀಲರ್ಗಳಿಂದ ಹಾಲು ಖರೀದಿ ಮಾಡಿ, ರಸ್ತೆಗೆ ಚೆಲ್ಲುತ್ತಿದ್ದಾರೆ. ಇದಕ್ಕಾಗಿಯೇ ಸುಮಾರು 300 ಜನರ ತಂಡ ಕೆಲಸ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಸದ್ಯ ಕೆಎಂಎಫ್ ಮಂಡ್ಯ ಹಾಲು ಒಕ್ಕೂಟದಿಂದ ದೆಹಲಿ, ಹರಿಯಾಣ ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿ ಮಾರಾಟ ಮಾಡಲು 2.50 ಲಕ್ಷ ಲೀಟರ್ ಹಾಲನ್ನು ಟ್ಯಾಂಕರ್ ಮೂಲಕ ಕಳಿಸುತ್ತಿದೆ. ದೆಹಲಿ ಹೊರವಲಯದ ಘಟಕದಲ್ಲಿ ಹಾಲನ್ನು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದೆ. ಆದರೆ ಇದಕ್ಕೆ ತಡೆಯೊಡ್ಡಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ.