ಮುಖ್ಯಮಂತ್ರಿ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ: ಗೃಹ ಸಚಿವ ಪರಮೇಶ್ವರ್

ಮುಖ್ಯಮಂತ್ರಿ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ: ಗೃಹ ಸಚಿವ ಪರಮೇಶ್ವರ್

ಬೆಂಗಳೂರು: “ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಯವರ ಪಾತ್ರ ಏನೂ ಇಲ್ಲ. ಮುಂದಿನ ನ್ಯಾಯಾಂಗ ಹೋರಾಟ ಮಾಡಲು ಅವಕಾಶ ಇರುವುದರಿಂದ ಮುಖ್ಯಮಂತ್ರಿಯವರು ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ” ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಮುಖ್ಯಮಂತ್ರಿ ಯಾವುದೇ ಕಡತಕ್ಕೆ ರುಜು ಹಾಕಿಲ್ಲ. ಅಧಿಕಾರ ದುರ್ಬಳಕೆ ಆಗಿಲ್ಲ ಎಂದು ನ್ಯಾಯಕ್ಕಾಗಿ ಹೈಕೋರ್ಟ್ಗೆ ಹೋಗಿದ್ದೆವು. ಅದಕ್ಕೆ ವಿರುದ್ಧವಾದ ತೀರ್ಪು ಬಂದಿದೆ. ತೀರ್ಪನ್ನು ಗೌರವಿಸುತ್ತೇವೆ. ಆದರೆ, ಎಲ್ಲೋ ಒಂದುಕಡೆ ನಮಗೆ ನ್ಯಾಯ ಸಿಗಲಿಲ್ಲವೇನೋ ಅನ್ನಿಸುತ್ತಿದೆ. ಮುಂದಿನ ನ್ಯಾಯಾಂಗ ಹೋರಾಟದ ಬಗ್ಗೆ ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ” ಎಂದರು.

“ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು. ಅಧಿಕಾರ ಬಿಟ್ಟು ಇಳಿಯಬೇಕು ಎನ್ನುವ ಮಾತುಗಳು ಪ್ರತಿಪಕ್ಷದವರಿಂದ ಕೇಳಿಬರುತ್ತಿವೆ. ಇದ್ಯಾವುದು ಕೂಡ ಆಗುವುದಿಲ್ಲ. ಸಿಎಂ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂದು ಅನೇಕರು ಸ್ಪಷ್ಟಪಡಿಸಿದ್ದಾರೆ. ನಾನು ಸಹ ಇದೇ ಮಾತನ್ನು ಹೇಳುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ 40 ವರ್ಷದ ರಾಜಕೀಯ ಜೀವನದಲ್ಲಿ ಯಾವುದೇ ರೀತಿಯ ಆಪಾದನೆಗಳು ಬಂದಿಲ್ಲ. ಈಗ ರಾಜಕೀಯ ದುರುದ್ದೇಶದಿಂದ ಆರೋಪಗಳನ್ನು ಮಾಡಿದ್ದಾರೆ. ಎಂತಹವರಿಗೂ ಇಂತಹ ಆಪಾದನೆಯಿಂದ ನೋವಾಗುವುದು ಸಹಜ. ಇದಕ್ಕೆ ಹೋರಾಟ ಮಾಡಬೇಕಲ್ಲವೇ? ವಿಪಕ್ಷದವರು ರಾಜಕೀಯ ದುರುದ್ದೇಶದಿಂದ ಮಾಡಿರುವ ಆರೋಪವನ್ನು ಜನಸಮುದಾಯಕ್ಕೆ ತೋರಿಸುತ್ತೇವೆ” ಎಂದು ಹೇಳಿದರು.

ಹೈಕೋರ್ಟ್ ವಿಚಾರಣೆ ವೇಲೆ ‘ಮುಖ್ಯಮಂತ್ರಿಯವರ ಪಾತ್ರ ಏನಿದೆ ಎಂಬುದನ್ನು ಹೇಳಿ. ಈ ಬಗ್ಗೆ ಯಾರು ಹೇಳುತ್ತಿಲ್ಲವಲ್ಲ’ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. ಸಿಎಂ ಪಾತ್ರ ಏನು ಎಂಬುದು ಜಡ್ಜ್ಮೆಂಟ್ನಲ್ಲಿ ಎಲ್ಲಿಯೂ ಕಾಣಿಸಿಲ್ಲ. ದ್ವಿಸದಸ್ಯ ಪೀಠ ಅಥವಾ ಸುಪ್ರೀಂಕೋರ್ಟ್ಗೆ ಹೋಗುವ ಬಗ್ಗೆ ಮುಖ್ಯಮಂತ್ರಿ ಮತ್ತು ಅವರ ಕಾನೂನು ಸಲಹೆಗಾರರು ತೀರ್ಮಾನ ಮಾಡುತ್ತಾರೆ. ನಮಗೆ ನ್ಯಾಯ ಸಿಕ್ಕಿಲ್ಲ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನ್ಯಾಯಯುತವಾದ ತೀರ್ಮಾನ ಬರುತ್ತದೆ ಎಂಬ ವಿಶ್ವಾಸವಿದೆ” ಎಂದು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *