ದುರ್ಘಟನೆ ವಿಷಯದಲ್ಲಿ ರಾಜಕಾರಣ ಸಲ್ಲದು:  ಸಚಿವೆ Lakshmi Hebbalkar

ಬೀದರ್ || CM ಬದಲಾವಣೆ ಆಗುವುದಾದರೆ DK ಪರವೋ, Siddaramaiah ಪರವೋ? Lakshmi Hebbalkar

ಬೆಂಗಳೂರು:  ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ನಡೆದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ದುರ್ಘಟನೆ ವಿಷಯದಲ್ಲಿ ರಾಜಕಾರಣ ನಡೆಸುವುದು ಸರಿಯಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಘಟನೆ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ಈ ದುರಂತವನ್ನು ಯಾರೂ ನಿರೀಕ್ಷಿಸಲು ಸಾಧ್ಯವಿಲ್ಲ. ಘಟನೆಯು ನಡೆಯಬಾರದಿತ್ತು. ನಡೆದು ಹೋಗಿದೆ. ಇದಕ್ಕಾಗಿ ಸರ್ಕಾರ ತೀವ್ರ ದುಃಖ ವ್ಯಕ್ತಪಡಿಸುತ್ತದೆ ಎಂದು ಹೇಳಿದರು.

* ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು

ಈಗ ದುರಂತ ನಡೆದ ಬಗ್ಗೆ ಚರ್ಚೆ ಮಾಡುವ ಸಮಯವಲ್ಲ. ಯಾರು ದುಃಖದಲ್ಲಿದ್ದಾರೆ, ಅವರಿಗೆ ಸಾಂತ್ವನ ಹೇಳುವುದು ಮುಖ್ಯ. ಈ ವಿಚಾರದಲ್ಲಿ ಯಾರೇ ರಾಜಕಾರಣ ಮಾಡಿದರೂ ತಪ್ಪು. ರಾಜ್ಯದ ಜನರಿಗೆ, ಅದರಲ್ಲೂ ಯಾರು ದುಃಖದಲ್ಲಿದ್ದಾರೆ, ಅವರಿಗೆ ಸಾಂತ್ವಾನ ಹೇಳುವ ಕೆಲಸ ಆಗಬೇಕು. ಈ ವಿಷಯದಲ್ಲಿ ಯಾರೂ ರಾಜಕೀಯ ಬೇಳೆ ಬೇಯಿಸಿಕೊಳ್ಳಬಾರದು ಎಂದು ನುಡಿದರು.

* ಕೊಲೆಯೆಂದು ಬಿಂಬಿಸುವುದು ಸರಿಯಲ್ಲ

ವಿಜಯೋತ್ಸವದ ವೇಳೆ ಸಂಭವಿಸಿರುವ ಘಟನೆ ಅಚಾನಕ್ಕಾಗಿ ನಡೆದಿರುವುದು. ಘಟನೆಯ ಬಗ್ಗೆ ಎಲ್ಲರಿಗೂ  ಅತ್ಯಂತ ನೋವು ಇದೆ. ಆದರೆ, ಇದೊಂದು ಸರ್ಕಾರದ ಕೊಲೆಯೆಂದು ಬಿಂಬಿಸುವುದು ಸರಿಯಲ್ಲ. ಈ ರೀತಿ ಘಟನೆ ಆಗಲಿ ಎಂದು ನಾವಾಗಲಿ, ನೀವಾಗಲಿ ಯಾರಾದರೂ ಬಯಸಬಹುದಾ ಎಂದು ಸಚಿವರು ಪ್ರಶ್ನಿಸಿದರು.

ಘಟನೆಯ ಜವಾಬ್ದಾರಿಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಾವೆಲ್ಲರೂ ಜವಾಬ್ದಾರಿ ಸ್ಥಾನದಲ್ಲಿ ಇರುವವರು. ಅತ್ಯಂತ ಜವಾಬ್ದಾರಿಯುತವಾಗಿ ಮಾತನಾಡಬೇಕು ಎಂದು ಹೇಳಿದರು.

* ಮೃತರ ಕುಟುಂಬಗಳಿಗೆ ಸಾಂತ್ವಾನ

ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗ, ವಾರಸುದಾರರಿಗೆ, ಪೋಷಕರಿಗೆ ಸಾವಿನ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರಲ್ಲದೆ, ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ ಎಂದು ಅವರು ಆಶಿಸಿದರು.

Leave a Reply

Your email address will not be published. Required fields are marked *