ಬಿಬಿಎಂಪಿಯ ಎಲ್ಲಾ ವಾರ್ಡ್ಗೆ ನೋಡಲ್ ಅಧಿಕಾರಿ ನೇಮಕ: ಡಿ ಕೆ ಶಿವಕುಮಾರ್ ಸೂಚನೆ

ಬಿಬಿಎಂಪಿಯ ಎಲ್ಲಾ ವಾರ್ಡ್ಗೆ ನೋಡಲ್ ಅಧಿಕಾರಿ ನೇಮಕ: ಡಿ ಕೆ ಶಿವಕುಮಾರ್ ಸೂಚನೆ

ಬೆಂಗಳೂರು : ಬಿಬಿಎಂಪಿಯ ಎಲ್ಲಾ ವಾರ್ಡ್ ಗಳಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸುವ ಸಲುವಾಗಿ ವಾರ್ಡ್ ಗೆ ಒಬ್ಬ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಸುತ್ತೋಲೆ ಹೊರಡಿಸಿದ್ದಾರೆ.

ಉಪ ಮುಖ್ಯ ಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರ ಸೂಚನೆಯ ಮೇರೆಗೆ ಎಲ್ಲಾ ವಲಯಗಳಲ್ಲಿಯೂ ಪ್ರತಿ ವಾರ್ಡ್ ಗೆ ಒಬ್ಬ ಅಧಿಕಾರಿಯನ್ನು ಮೇಲುಸ್ತುವಾರಿಗಾಗಿ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಸದರಿ ಅಧಿಕಾರಿಗಳು ತಮಗೆ ನಿಯೋಜಿಸಿರುವ ವಾರ್ಡ್ ಗಳಲ್ಲಿ ಕಡ್ಡಾಯವಾಗಿ ಪ್ರತಿ ಬುಧವಾರದಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಕಛೇರಿಯ ಅವಧಿಯಲ್ಲಿ ಹಾಜರಿದ್ದು, ಸಾರ್ವಜನಿಕರೊಂದಿಗೆ ಸಭೆಯನ್ನು ನಡೆಸಿ, ಅವರ ದೂರು ಸಮಸ್ಯೆಗಳನ್ನು ಆಲಿಸಿ, ಇತರೆ ವಾರ್ಡ್ ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸೂಚಿಸಿದೆ.

ಪ್ರತಿ ಬುಧವಾರ ನಡೆಯುವ ಸಾರ್ವಜನಿಕ ಸಭೆ ಕುರಿತು ಸಾರ್ವಜನಿಕರಿಗೆ ಸೂಕ್ತ ಪ್ರಚಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇತರೆ ಇಲಾಖೆಗಳಿಗೆ ಸಂಬಂಧಿಸಿದ್ದಲ್ಲಿ ಸಂಬಂಧಪಟ್ಟ ಅಧಿಕಾರಗಳೊಂದಿಗೆ ಸಮನ್ವಯ ಸಾಧಿಸಿ, ಸಮಸ್ಯೆಯನ್ನು ವಾರ್ಡ್ ಹಂತದಲ್ಲಿಯೇ ಪರಿಹರಿಸಲು ನೋಡಲ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ವಾರ್ಡ್ ಮಟ್ಟದಲ್ಲಿ ಬಗೆಹರಿಸಲಾಗದ ಸಮಸ್ಯೆಗಳನ್ನು ವಲಯ ಮಟ್ಟದಲ್ಲಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ನೋಡಲ್ ಅಧಿಕಾರಿಗಳು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಪಾಲಿಕೆಯ 8 ವಲಯಗಳಲ್ಲಿ ಬರುವ ಎಲ್ಲಾ ವಾರ್ಡ್ ಗಳಲ್ಲಿ ಪ್ರತಿ ಬುಧವಾರ ಸಭೆ ನಡೆಯಲಿದೆ. ಈ ಸಂಬಂಧ ವಲಯ ಆಯುಕ್ತರು ವೇಳಾಪಟ್ಟಿ ಸಿದ್ದಪಡಿಸಿಕೊಂಡು ಪ್ರತಿ ಬುಧವಾರದಂದು ತಮ್ಮ ವಲಯದ ವಾರ್ಡ್ ಗಳಿಗೆ ಭೇಟಿ ನೀಡಿ ವಾರ್ಡ್ ಮಟ್ಟದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದೆ.

ಪಾಲಿಕೆಯ 8 ವಲಯಗಳಲ್ಲಿ ಬರುವ ವಾರ್ಡ್ ಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದ್ದು, ವಾರ್ಡ್ ಗೆ ನಿಯೋಜಿಸಿರುವ ನೋಡಲ್ ಅಧಿಕಾರಿಯ ಹೆಸರು, ವಾರ್ಡ್ ಹೆಸರು, ಹುದ್ದೆ ಹಾಗೂ ದೂರವಾಣಿ ಸಂಖ್ಯೆಯುಳ್ಳ ಪಟ್ಟಿಯನ್ನು ಪಾಲಿಕೆಯ ವೆಬ್ ಸೈಟ್ bbmp.gov.in/home ನಲ್ಲಿ ಅಪ್ಲೋಡ್ ಮಾಡಲಾಗಿದೆ.

Leave a Reply

Your email address will not be published. Required fields are marked *