ರೆಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಪಾಲಾಗಿದ್ದರು, ಆದ್ರೆ ಆರೋಗ್ಯದ ಸಮಸ್ಯೆಯಿಂದಾಗಿ ಮಧ್ಯಂತರ ಜಾಮೀನಿನ ಮೇರೆಗೆ 6 ವಾರಗಳ ಕಾಲ ಚಿಕಿತ್ಸೆಗಾಗಿ ಜೈಲಿನಿಂದ ಹೊರಬಂದು ನಿಟ್ಟುಸಿರು ಬಿಟ್ಟಿದ್ದರು. ದರ್ಶನ್ ಬೆನ್ನು ನೋವಿನ ಹಿನ್ನಲೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಒಪ್ಪುತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ವು ಆದ್ರೆ ಈಗ ದಾಸ ಶಸ್ತ್ರ ಚಿಕಿತ್ಸೆಗೆ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಶಸ್ತ್ರ ಚಿಕಿತ್ಸೆಯ ವಿಷಯ ಒಂದೆಡೆಯಾದ್ರೆ, ಮತ್ತೊಂದೆಡೆ ದರ್ಶನ್ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದ ‘ನವಗ್ರಹ’ ಸಿನಿಮಾ ರೀ-ರಿಲಿಸ್ ಆಗಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿದೆ.
ಮಧ್ಯಂತರ ಜಾಮೀನಿನ ಮೇಲೆ ಹೊರಬಂದು BGS ಆಸ್ಪತ್ರೆಗೆ ದಾಖಲಾಗಿರುವ ನಟ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆ ತೀವ್ರಗೊಂಡಿದೆ. ಇಷ್ಟು ದಿನ ಸರ್ಜರಿ ಬೇಡ್ವೇ ಬೇಡ ಎನ್ನುತ್ತಿದ್ದ ಅವರು ಇದೀಗ ಸರ್ಜರಿಗೆ ಓಕೆ ಎಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಸಂಬಂಧ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ಜೊತೆ ವೈದ್ಯರು ಚರ್ಚೆ ನಡೆಸಿದ್ದಾರೆ. ಪಿಜಿಯೋಥೆರಪಿ ಜೊತೆ ಶಸ್ತ್ರ ಚಿಕಿತ್ಸೆ ಮಾಡಲೇಬೇಕು ಎಂದು ವೈದ್ಯರು ದಾಸನಿಗೆ ಮನವರಿಕೆ ಮಾಡಿದ್ದು, ಶಸ್ತ್ರ ಚಿಕಿತ್ಸೆಗೆ ಸಿದ್ಧತೆ ನಡೆಯುತ್ತಿದೆ ಎನ್ನಲಾಗಿದೆ.
ಇನ್ನು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಖಳನಾಯಕನಾಗಿ ನಟಿಸಿದ ಸಿನಿಮಾ ನವಗ್ರಹ. ಹೀರೋ ಆಗಿ ಮಿಂಚುತ್ತಿದ್ದ ನಟನೊಬ್ಬ ಖಳನಾಯಕನಾಗಿ ನಟಿಸಿದರೆ ಹೇಗಿರುತ್ತೆ? ಇದರ ಚಿಕ್ಕದೊಂದು ಕಲ್ಪನೆಯೂ ಅಂದು ಇರಲಿಲ್ಲ. ಸಿನಿಪ್ರಿಯರು ಹೇಗೆ ಪ್ರತಿಕ್ರಿಯೆ ನೀಡಬಹುದು ಅನ್ನೋದು ಕೂಡ ಗೊತ್ತಿರಲಿಲ್ಲ. ಹೀಗಿದ್ದರೂ ಕೈಗೆತ್ತಿಕೊಂಡ ಸಿನಿಮಾವಿದು. ಲೆಕ್ಕ ಹಾಕಿ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡಲಾಗಿದೆ. ಹೀಗಿದ್ದೂ 2ನೇ ದಿನ 15 ಲಕ್ಷದಿಂದ 18 ಲಕ್ಷದವರೆಗೂ ಕಲೆಕ್ಷನ್ ಆಗಿರಬಹುದೆಂದು ವಿತರಕರ ವಲಯದಲ್ಲಿ ಲೆಕ್ಕ ಹಾಕಲಾಗಿದೆ.