ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಗುರುವಾರ ಬೆಳಗ್ಗೆಯೇ ದೊಡ್ಡ ಶಾಕ್ ನೀಡಿದ ಲೋಕಾಯುಕ್ತ ಅಧಿಕಾರಿಗಳು ಬೆಂಗಳೂರು, ಮಂಗಳೂರು ಸೇರಿದಂತೆ 4 ಕಡೆಗಳ 25 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಇದರಿಂದಾಗಿ ಮುಂಜಾನೆಯ ಗಡದ್ದು ನಿದ್ದೆಯಲ್ಲಿದ್ದ ಭ್ರಷ್ಟ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಅಕ್ರಮ ಆಸ್ತಿ ಸಂಪಾದಿಸಿವರಿಗೆ ಲೋಕಾಯುಕ್ತ ಬಿಸಿ ಮುಟ್ಟಿದೆ. ದಾಳಿ ವೇಳೆ, ಅಪಾರ ಪ್ರಮಾಣದ ಚಿನ್ನಾಭರಣ ಕಂಡು ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿಬೀಳುವಂತಾಗಿದೆ.
ಬೆಂಗಳೂರಿನಲ್ಲಿ ಟೌನ್ ಪ್ಲಾನಿಂಗ್ ನಿರ್ದೇಶಕ ತಿಪ್ಪೇಸ್ವಾಮಿ ಮನೆ ಮೇಲೆ ರೇಡ್ ವೇಳೆ ಕಂಡುಬಂದ ಅಪಾರ ಮೌಲ್ಯದ ಆಸ್ತಿ ದಾಖಲೆಗಳು, ಚಿನ್ನಾಭರಣ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಬನಶಂಕರಿಯ 3ನೇ ಹಂತದ ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ನಿವಾಸದಲ್ಲಿ ಶೋಧ ನಡೆಸಿದ ಅಧಿಕಾರಿಗಳಿಗೆ, ಬೆಚ್ಚಿಬೀಳುವಷ್ಟು ಸಂಪತ್ತು ದೊರೆತಿದೆ.
ದಾಳಿ ವೇಳೆ ತಿಪ್ಪೇಸ್ವಾಮಿ ಮನೆಯಲ್ಲಿ ಅಪಾರ ಮೌಲ್ಯದ ಚಿನ್ನಾಭರಣ ಕಂಡು ಲೋಕಾಯುಕ್ತ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. 28 ಕ್ಕೂ ಹೆಚ್ಚು ಜೊತೆ ಓಲೆ, 23 ಕ್ಕೂ ಹೆಚ್ಚು ಚಿನ್ನದ ಸರ, ಮುತ್ತಿನ ಹಾರ ಪತ್ತೆಯಾಗಿದೆ. ಇದಿಷ್ಟೇ ಅಲ್ಲ, ಕೋಟಿ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೆಸ್, ಚಿನ್ನದ ಉಂಗುರವೂ ಪತ್ತೆಯಾಗಿದೆ.
ಕಂತೆ ಕಂತೆ ನೋಟು, ದುಬಾರಿ ವಾಚು, ಕೆಜಿಗಟ್ಟಲೆ ಬೆಳ್ಳಿ
ಕೇವಲ ಬಂಗಾರ ಮಾತ್ರ ಅಲ್ಲದೆ, 500, 200 ರೂ. ಮುಖ ಬೆಲೆಯ 8 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. 8 ಕ್ಕೂ ಹೆಚ್ಚು ದುಬಾರಿ ಬೆಲೆಯ ಬ್ರಾಂಡೆಡ್ ವಾಚ್ಗಳು ಸಿಕ್ಕಿವೆ. ಇನ್ನು ಕೆಜಿಗಟ್ಟಲೆಯ ಬೆಳ್ಳಿ ಸಾಮಾಗ್ರಿಗಳು ಕೂಡ ಪತ್ತೆಯಾಗಿದೆ.
ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಅಬಕಾರಿ ಇಲಾಖೆ ಎಸ್ಪಿ ಮನೆ ಮೇಲೂ ಲೋಕಾಯುಕ್ತ ದಾಳಿ ಮಾಡಿದೆ. ಬೆಳಗ್ಗೆ 6 ಗಂಟೆಯ ವೇಳೆ ಅಬಕಾರಿ ಇಲಾಖೆ ಎಸ್ಪಿ ಮೋಹನ್ ಮನೆ ಮೇಲೆ ರೇಡ್ ಮಾಡಲಾಗಿದೆ. ಮಹತ್ವದ ದಾಖಲೆಗಳನ್ನ ಪರಿಶೀಲನೆ ಮಾಡಲಾಯಿತು.