ಬೆಂಗಳೂರು: ಪತಿಯೇ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಬಾಣಸವಾಡಿ ಬಚ್ಚಪ್ಪ ಲೇಔಟ್ನ 3ನೇ ಕ್ರಾಸ್ನ ಮನೆಯೊಂದರಲ್ಲಿ ಶುಕ್ರವಾರ (ಇಂದು) ಮುಂಜಾನೆ 4 ಗಂಟೆಯ ಸುಮಾರಿಗೆ ನಡೆದಿದೆ.

ರಮೇಶ್ ಎಂಬಾತ ಮರಗೆಲಸಕ್ಕೆ ಬಳಸುವ ಉಳಿಯಿಂದ ಪತ್ನಿ ಕಲೈವಾಣಿಗೆ ಹೊಡೆದು ಹತ್ಯೆಗೈದಿರುವ ಆರೋಪಿ. ಕೃತ್ಯದ ಬಳಿಕ ಬಾಣಸವಾಡಿ ಠಾಣೆಗೆ ಬಂದಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ರಮೇಶನ ಮೊದಲ ಪತ್ನಿ ಹಾಗೂ ಕಲೈವಾಣಿಯ ಮೊದಲ ಪತಿ ಸಹ ಮೃತಪಟ್ಟಿದ್ದು, ಇಬ್ಬರೂ 10 ವರ್ಷಗಳ ಹಿಂದೆಯೇ ಪರಸ್ಪರ ಎರಡನೇ ಮದುವೆಯಾಗಿದ್ದರು. ದಂಪತಿಗೆ 9 ವರ್ಷದ ಮಗನಿದ್ದಾನೆ. ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ ರಮೇಶ್ ಆಗಾಗ ತನ್ನ ಮೊದಲ ಪತ್ನಿಯ ಇಬ್ಬರು ಹೆಣ್ಣು ಮಕ್ಕಳನ್ನು ಭೇಟಿಯಾಗುತ್ತಿದ್ದ. ಇದೇ ವಿಷಯವಾಗಿ ಕಳೆದ ಒಂದು ವರ್ಷದಿಂದಲೂ ಕಲೈವಾಣಿ ಹಾಗೂ ರಮೇಶ್ ನಡುವೆ ಗಲಾಟೆಗಳಾಗುತ್ತಿತ್ತು. ಗುರುವಾರವೂ ಸಹ ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿತ್ತು. ಈ ವೇಳೆ, ಪತಿ ಮತ್ತು ಆತನ ಮೊದಲ ಪತ್ನಿಯ ಮಕ್ಕಳನ್ನು ಕಲೈವಾಣಿ ಅಸಭ್ಯವಾಗಿ ನಿಂದಿಸಿದ್ದಳು. ಇದರಿಂದ ಸಿಟ್ಟಿಗೆದ್ದ ರಮೇಶ್, ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಉಳಿಯಿಂದ ಹೊಡೆದು ಪತ್ನಿಯ ಹತ್ಯೆಗೈದಿದ್ದಾನೆ. ಬಳಿಕ ಪೊಲೀಸ್ ಠಾಣೆಗೆ ತೆರಳಿ ಹತ್ಯೆಯ ವಿಷಯ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
