ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನದ ಒಲಿಂಪಿಕ್ ಚಿನ್ನದ ಪದಕ ವಿಜೇತ ಅರ್ಷದ್ ನದೀಮ್ ನಿಷೇಧಿತ ಸಂಘಟನೆಯಾದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಜೊತೆ ಸಂಪರ್ಕ ಹೊಂದಿರುವ ವ್ಯಕ್ತಿಯೊಂದಿಗೆ ಕಾಣಿಸಿಕೊಂಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಅರ್ಷದ್ ನದೀಮ್ ಅವರ ಮನೆಗೆ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ)ಮತ್ತು ಜಮಾತ್-ಉದ್- ದಾವಾ (ಜೆಯುಡಿ)ನ ರಾಜಕೀಯ ಮುಖವಾದ ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ಸದಸ್ಯ ಹ್ಯಾರಿಸ್ ದರ್ ಬಂದು ಅಭಿನಂದನೆ ಸಲ್ಲಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಪ್ಯಾರಿಸ್ ಒಲಿಂಪಿಕ್ನಲ್ಲಿ ಚಿನ್ನ ಗೆದ್ದ ಸ್ಟಾರ್ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಅವರು, ಅವರೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುತ್ತಿರುವುದು ಕಂಡುಬಂದಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಿಯಾನ್ ಚನ್ನುವಿನಲ್ಲಿ ಅರ್ಷದ್ ನದೀಮ್ ಅವರೊಂದಿಗೆ ಹ್ಯಾರಿಸ್ ದಾರ್ ಅವರು ಮನೆಯಲ್ಲಿ ಕುಳಿತಿರುವುದು ಕಂಡುಬಂದಿದೆ. ಹ್ಯಾರಿಸ್ ದಾರ್ ಅವರು ಕ್ಷೇತ್ರದ ರಾಜಕೀಯ ವ್ಯಕ್ತಿಯಾಗಿದ್ದು, ಅರ್ಷದ್ ನದೀಮ್ ಅವರ ಸಾಧನೆಯನ್ನು ಅಭಿನಂದಿಸಲು ಬಂದಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಅರ್ಷದ್ ನದೀಮ್ ಅವರ ಪಕ್ಕದಲ್ಲಿ ಹ್ಯಾರಿಸ್ ದಾರ್ ಕುಳಿತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ವಿವಾದ ಸೃಷ್ಟಿಯಾಗಿದೆ.
ಯುಎಸ್ ಖಜಾನೆ ಇಲಾಖೆಯು ‘ವಿಶೇಷವಾಗಿ ಗೊತ್ತುಪಡಿಸಿದ ಜಾಗತಿಕ ಭಯೋತ್ಪಾದಕರು’ ಎಂಬ ಶೀರ್ಷಿಕೆಯಡಿಯಲ್ಲಿ ನಿಷೇಧಿತ ವ್ಯಕ್ತಿಗಳ ಪಟ್ಟಿಯಲ್ಲಿ ಹ್ಯಾರಿಸ್ ದಾರ್ ಅವರ ಹೆಸರೂ ಇದೆ. ನಿಷೇಧಿತ ಸಂಘಟನೆಯಾದ ಲಷ್ಕರ್-ಎ-ತೈಬಾದಲ್ಲಿ (ಎಲ್‌ಇಟಿ) ಸಕ್ರಿಯ ಪಾತ್ರಕ್ಕಾಗಿ 2018 ರಲ್ಲಿ ಯುನೈಟೆಡ್ ಸ್ಟೇಟ್ಸ್ ದರ್ ಹೆಸರನ್ನು ಪಟ್ಟಿಮಾಡಿದೆ.
ಲಷ್ಕರ್-ಎ-ತೈಬಾ (ಎಲ್‌ಇಟಿ) ವಿಶ್ವಸಂಸ್ಥೆಯ ಗುರುತಿಸಲಾದ ಭಯೋತ್ಪಾದಕ ಸಂಘಟನೆಗಳ ಪಟ್ಟಿಯಲ್ಲಿ ಹ್ಯಾರಿಸ್ ದರ್ ಹೆಸರು ಇದೆ. ಪಾಕಿಸ್ತಾನ ಸರ್ಕಾರವು ಹಫೀಜ್ ಸಯೀದ್ ಮತ್ತು ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಂಗಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದ ನಂತರ, JUDನ ಅನೇಕ ಕಾರ್ಯಕರ್ತರಿಗೆ ರಾಜಕೀಯ ರಕ್ಷಣೆ, ಆಶ್ರಯವನ್ನು ಒದಗಿಸಲು ಹೊಸ ರಾಜಕೀಯ ಪಕ್ಷವಾದ ಮಿಲಿ ಮುಸ್ಲಿಂ ಲೀಗ್ (MML) ಅನ್ನು ರಚಿಸಲಾಯಿತು.
MML ಅನ್ನು 2017 ರಲ್ಲಿ ಸ್ಥಾಪಿಸಲಾಯಿತು ಮತ್ತು 2018 ರ ಚುನಾವಣೆಗಳಲ್ಲಿ ಸ್ಪರ್ಧಿಸಿತ್ತು. ನಂತರ 2024 ರ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಹ್ಯಾರಿಸ್ ದಾರ್ ಈಗ ಎಂಎಂಎಲ್‌ನ ಜಂಟಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಪಕ್ಷದ ಸಕ್ರಿಯ ಸದಸ್ಯರಾಗಿದ್ದಾರೆ. MML JUD ಎಲ್ಇಟಿಯ ಸ್ಥಾಪಕ ಮತ್ತು 26/11 ಮುಂಬೈ ದಾಳಿಯ ಮಾಸ್ಟರ್‌ಮೈಂಡ್, ಹಫೀಜ್ ಸಯೀದ್‌ನ ರಾಜಕೀಯ ಶಾಖೆಯಾಗಿದೆ.
”ಹ್ಯಾರಿಸ್ ದರ್ ಲಷ್ಕರ್-ಎ-ತೊಯ್ಬಾ ಜೊತೆ ನಂಟು ಹೊಂದಿರಬಹುದು. ಆದರೆ, ಅವರು ಅರ್ಷದ್ ನದೀಮ್ ಅವರನ್ನು ಅಭಿನಂದಿಸಲು ಬಂದಿದ್ದ ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ರಾಜಕೀಯ ಪಕ್ಷದ ರಾಜಕೀಯ ಪ್ರತಿನಿಧಿಯಾಗಿದ್ದಾರೆ. ಮಿಲಿ ಮುಸ್ಲಿಂ ಲೀಗ್ ಪಾಕಿಸ್ತಾನದಲ್ಲಿ ನೋಂದಾಯಿತ ರಾಜಕೀಯ ಪಕ್ಷವಾಗಿದೆ ಮತ್ತು ಅರ್ಷದ್ ನದೀಮ್ ಅವರನ್ನು ಭೇಟಿ ಮಾಡುವ ಎಲ್ಲರಂತೆ, ಎಂಎಂಎಲ್ ಸದಸ್ಯರಿಗೂ ಅದೇ ರೀತಿ ಮಾಡಲು ಎಲ್ಲಾ ಹಕ್ಕಿದೆ” ಎಂದು ರಾಜಕೀಯ ವಿಶ್ಲೇಷಕ ಅದ್ನಾನ್ ಶೌಕತ್ ಸಮರ್ಥಿಸಿಕೊಂಡಿದ್ದಾರೆ.