ತುಮಕೂರು: ಅಸ್ತಿ ವಿವಾದ ಹಿನ್ನೆಲೆಯಲ್ಲಿ ಮಚ್ಚಿನಿಂದ ಹೊಡೆದು ಮಗನೇ ತಂದೆಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನ ಆಲಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ವೆಂಕಟಪ್ಪ (75) ಕೊಲೆಯಾದ ವ್ಯಕ್ತಿ. ಸಿದ್ದಪ್ಪ (45) ತಂದೆಯನ್ನು ಕೊಲೆಗೈದಿರುವ ಆರೋಪಿ.
ಮೂರೂವರೆ ಎಕರೆ ಆಸ್ತಿ ಹೊಂದಿದ್ದ ವೆಂಕಟಪ್ಪ, ಇತ್ತೀಚೆಗೆ ಒಂದಿಷ್ಟು ಜಮೀನು ಮಾರಾಟ ಮಾಡಿದ್ದರು. ಜಮೀನು ಮಾರಾಟ ಮಾಡಿದ್ದರಿಂದ ಬಂದ 25 ಲಕ್ಷ ರೂ. ಹಣವನ್ನು ಮಗಳಿಗೆ ಕೊಟ್ಟಿದ್ದರು. ಹಾಗೂ ಜಮೀನನ್ನೂ ಕೂಡ ಮಗಳ ಹೆಸರಿಗೆ ಬರೆದು ಕೊಟ್ಟಿದ್ದರು ಎನ್ನಲಾಗಿದೆ.
ಇದೇ ವಿಚಾರಕ್ಕೆ ತಂದೆ-ಮಗನ ನಡುವೆ ಹಲವು ಬಾರಿ ಗಲಾಟೆ ನಡೆದಿತ್ತು. ಆಗ ಗ್ರಾಮದ ಹಿರಿಯರ ಸಮ್ಮುಖದಲ್ಲಿ ನ್ಯಾಯ ಪಂಚಾಯಿತಿ ಸಹ ಮಾಡಲಾಗಿತ್ತು. ಆದರೂ ಸಹ ಮಗನಿಗೆ ಆಸ್ತಿ, ಹಣ ನೀಡಲು ತಂದೆ ವೆಂಕಟಪ್ಪ ಹಿಂದೇಟು ಹಾಕಿದ್ದರು. ಇದರಿಂದ ಕುಪಿತಗೊಂಡ ಸಿದ್ದಪ್ಪ ತಂದೆಯ ತಲೆಗೆ ಮಚ್ಚಿನಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ವೆಂಕಟಪ್ಪ ಸಾವನ್ನಪ್ಪಿದ್ದಾನೆ. ನಂತರ ಆರೋಪಿ ಸಿದ್ದಪ್ಪ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.