ಬೆಂಗಳೂರು: ಉಪ ಚುನಾವಣೆ ಹೊಸ್ತಿಲಲ್ಲಿ ಸಿಎಂ ಸಿದ್ದರಾಮಯ್ಯ ಮುಡಾ ತನಿಖೆಯಲ್ಲಿ ಸಿಲುಕಿಕೊಂಡಿದ್ದಾರೆ. ಮುಡಾ ಹಗರಣದ ತನಿಖೆಗೆ ಹಾಜರಾಗುವುದು ಒಂದೆಡೆ ಆದರೆ ಮತ್ತೊಂದೆಡೆ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ಉಪಚುನಾವಣೆ ಪ್ರಚಾರಕ್ಕೆ ಹಾಜರಾಗಬೇಕಿದೆ.
ಪ್ರಚಾರದ ದಿನವೇ ವಿಚಾರಣೆಗೆ ಹಾಜರಾಗಲು ಸಿದ್ದರಾಮಯ್ಯ ಅವರಿಗೆ ನೋಟೀಸ್ ನೀಡಿರುವುದರಿಂದ ಯಾವುದಕ್ಕೆ ಮೊದಲು ಪ್ರಾಶಸ್ತ್ಯ ಕೊಡಲಿದ್ದಾರೆ ಎನ್ನುವುದು ಕುತೂಹಲ ಮೂಡಿದೆ.
ಹೌದು…. ಲೋಕಾಯುಕ್ತ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರಿಗೆ ನವೆಂಬರ್ 6ರಂದು ತನಿಖೆಗೆ ಹಾಜರಾಗಲು ನೋಟೀಸ್ ನೀಡಿದ್ದಾರೆ. ಆದರೆ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆಯ ಪ್ರಚಾರದ ಭರಾಟೆ ಜೋರಾಗಿದ್ದು ಸಿದ್ದರಾಮಯ್ಯ ಯಾವುದಕ್ಕೆ ಹಾಜರಾಗುತ್ತಾರೆಂದು ಕಾದು ನೋಡಬೇಕಿದೆ.
ಈಗಾಗಲೇ ತಾವು ವಿಚಾರಣೆಗೆ ಹಾಜರಾಗುವುದಾಗಿ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಆದರೆ ಉಪಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿದ್ದು ಸಿದ್ದರಾಮಯ್ಯ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಮುಡಾ ಹಗರಣ ತನಿಖೆಗೆ ಸಿದ್ದರಾಮಯ್ಯ ಹಾಜರಾಗುವ ಸಾಧ್ಯತೆಗಳು ಕಡಿಮೆ ಇದೆ ಎನ್ನಲಾಗುತ್ತಿದೆ.
ಅಷ್ಟಕ್ಕೂ ಈ ಅನುಮಾನ ಹುಟ್ಟಲು ಕಾರಣ ಅಂದರೆ ಸಿದ್ದರಾಮಯ್ಯ ಅವರ ನವೆಂಬರ್ 6ರ ವೇಳಾಪಟ್ಟಿ ಈಗಾಗಲೇ ಸಿದ್ದವಾಗಿದೆ. ಈ ವೇಳಾಪಟ್ಟಿ ಪ್ರಚಾರ ಅವರು ಬುಧವಾರ ಬೆಳಗ್ಗೆ ಚನ್ನಪಟ್ಟಣದಲ್ಲಿ ಪ್ರಚಾರ ನಡೆಸಲಿದ್ದಾರೆ. ಬೆಳಿಗ್ಗೆ 10ಗಂಟೆಗೆ ಚನ್ನಪಟ್ಟಣ ಪ್ರಚಾರದಲ್ಲಿ ಭಾಗಿಯಾಗಲಿದ್ದು, ನಂತರ ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು ಸಿಎಂ ಸಿದ್ದರಾಮಯ್ಯ ಅವರ ಪರ ಪ್ರಚಾರ ಮಾಡಲಿದ್ದಾರೆ. ಜೊತೆಗೆ ವಿವಿಧ ಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ ಬುಧವಾರ (ನವೆಂಬರ್ 6)ದ ವೇಳಾಪಟ್ಟಿ ಈಗಾಗಲೇ ಸಿದ್ದವಾಗಿದ್ದು, ಪ್ರಚಾರಕ್ಕೆ ಬೇಕಾದ ಸಿದ್ದತೆಗಳು ಈಗಾಗಲೇ ನಡೆದಿವೆ. ಹೀಗಾಗಿ ಮುಡಾ ತನಿಖೆಗೆ ಸಿಎಂ ಹಾಜರಾಗುತ್ತಾರಾ ಅಥವಾ ಚನ್ನಪಟ್ಟಣ ಉಪಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಾರಾ ಎನ್ನುವ ಅನುಮಾನ ಮೂಡಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಎ1 ಆರೋಪಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಸುದೀರ್ಘ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಳಂಕ ಅಂಟಿಕೊಂಡಿರಲಿಲ್ಲ. ಆದರೀಗ ಅವರು ಮುಡಾ ಸೈಟ್ ವಿಚಾರಣೆ ಎದುರಿಸಬೇಕಾಗಿದೆ. ಅವರ ರಾಜಕೀಯ ಜೀವನದಲ್ಲಿ ಮೊದಲ ಬಾರಿಗೆ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಆದರೆ ಅವರು ತನಿಖೆಗೆ ಹಾಜರಾಗುತ್ತಾರಾ? ಅಥವಾ ಪ್ರಚಾರದಲ್ಲಿ ಭಾಗಿಯಾಗುತ್ತಾರಾ? ಎರಡನ್ನೂ ನಿಭಾಯಿಸುತ್ತಾರಾ? ಎನ್ನುವ ಬಗ್ಗೆ ಇನ್ನೂ ನಿಖರತೆ ಇಲ್ಲ. ಕಳೆದ ದಿನ ಶಿಗ್ಗಾಂವಿಯಲ್ಲಿ ಪ್ರಚಾರದ ವೇಳೆ ವಿಪಕ್ಷಗಳ ವಿರುದ್ಧ ಸಿಎಂ ಕಿಡಿ ಕಾರಿದ್ದರು. ಚುನಾವಣೆಯ ವೇಳೆ ಗಮನ ಬೇರೆಡೆ ಸೆಳೆಯಲು ವಿಪಕ್ಷಗಳು ಹುನ್ನಾರ ನಡೆಸಿವೆ ಎಂದು ಕಿಡಿ ಕಾರಿದ್ದರು.
ಮತ್ತೊಂದೆಡೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ರೈತರ ಪಹಣಿಯಿಂದ ವಕ್ಫ್ ಪದ ತೆಗೆದುಹಾಕುವಂತೆ ಆಗ್ರಹಿಸಿ ವಿಜಯಪುರ ಡಿಸಿ ಕಚೇರಿ ಬಳಿ ಶೋಭಾ ಹಾಗೂ ಯತ್ನಾಳ್ ಆಹೋರಾತ್ರಿ ಧರಣಿ ಆರಂಭಿಸಿದ್ದಾರೆ.