ಮಂಗಳೂರು: ಮದ್ಯಪ್ರಿಯರಿಗೆ ಸಿಹಿ ಸುದ್ದಿ ಇಲ್ಲಿದೆ. ಗೋವಾ ಮಾದರಿಯಲ್ಲಿ ರಾಜ್ಯದ ಬೀಚ್ ಗಳಲ್ಲಿಯೂ ಮದ್ಯ ಮಾರಾಟಕ್ಕೆ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸಿದೆ.
ಮಂಗಳೂರಿನಲ್ಲಿ ನಡೆದ ಕನೆಕ್ಟ್ -2024ರಲ್ಲಿ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಕೆ.ವಿ. ರಾಜೇಂದ್ರ, ರಾಜ್ಯದ ಬೀಚ್ ಗಳಲ್ಲಿ ಮದ್ಯ ಬಳಕೆಯ ಮೇಲೆ ಇರುವ ನಿರ್ಬಂಧಗಳನ್ನು ಸಡಿಲಿಕೆ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.
ರಾಜ್ಯದ ಬೀಚ್ ಗಳಿಗೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುವ ಮತ್ತು ಪ್ರವಾಸೋದ್ಯಮವನ್ನು ಇನ್ನಷ್ಟು ಲಾಭದಾಯಕವಾಗಿಸುವ ಉದ್ದೇಶದಿಂದ ಬೀಚ್ ಗಳಲ್ಲಿ ಗೋವಾ ಮಾದರಿಯಲ್ಲಿ ಮದ್ಯ ಮಾರಾಟ ಮತ್ತು ಮದ್ಯಪಾನಕ್ಕೆ ಅನುಮತಿ ನೀಡುವ ಬಗ್ಗೆ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸುತ್ತಿದೆ.
ರಾಜ್ಯದ ಬೀಚ್ ಗಳಲ್ಲಿ ಟೆಂಟ್ ಹಾಕುವುದು, ಮದ್ಯ ಮಾರಾಟ ಮತ್ತು ಮದ್ಯಪಾನಕ್ಕೆ ಅನುಮತಿ ನೀಡುವ ಪ್ರಸ್ತಾವನೆಯ ಕುರಿತಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಗೋವಾ ಮಾದರಿಯಲ್ಲಿ ಪ್ರವಾಸಿಗರನ್ನು ಸೆಳೆಯಲು ಬೀಚ್ ಗಳಲ್ಲಿ ಕೆಲ ಬದಲಾವಣೆ ಮಾಡಬೇಕಿದೆ. ಬೀಚ್ ಗಳಲ್ಲಿ ಸುರಕ್ಷತೆ ಹೆಚ್ಚಳ, ಜನರು ರಾತ್ರಿಯಲ್ಲಿ ಹೆಚ್ಚು ಸಮಯ ಕಳೆಯುವಂತೆ ಮಾಡಲು ಕಡಲ ತೀರಗಳಲ್ಲಿ ಹೆಚ್ಚಿನ ಲೈಟ್ ಅಳವಡಿಕೆ, ಟೆಂಟ್ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕಡಲ ತೀರಗಳ ಸಮೀಪ ಖಾಸಗಿ ಮತ್ತು ಸರ್ಕಾರಿ ಜಮೀನು ಹುಡುಕುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.