ನವರಾತ್ರಿಯ ಮೂರನೇ ದಿನ, ದುರ್ಗೆಯ ಮೂರನೇ ಅವತಾರವಾದ ಚಂದ್ರಘಂಟಾ ದೇವಿಗೆ ಅರ್ಪಿತವಾದ ದಿನ. ತನ್ನ ಭಕ್ತರ ಕಷ್ಟಗಳನ್ನು ಕ್ಷಣಮಾತ್ರದಲ್ಲೇ ನಿವಾರಿಸಿ, ಸಂತೋಷ, ಸಮೃದ್ಧಿಯನ್ನು ನೀಡುವ ತಾಯಿಯೇ ಈಕೆ. ಈಕೆಯನ್ನು ಹಲವಾರು ಮಂತ್ರ, ಸ್ತೋತ್ರ, ಪ್ರಾರ್ಥನೆಗಳಿಂದ ಒಲಿಸಿಕೊಳ್ಳಬಹುದು.
ದೇವಿ ಚಂದ್ರಘಂಟೆಯು ಚಿನ್ನದ ಮೈಬಣ್ಣ, ಹತ್ತು ತೋಳು ಹಾಗೂ ಮೂರು ಕಣ್ಣನ್ನು ಹೊಂದಿರುತ್ತಾಳೆ. ಘಂಟೆಯಾಕಾರದ ಚಂದ್ರನನ್ನು ಶಿರದಲ್ಲಿ ಧರಿಸಿದವಳಾದ್ದರಿಂದ ಈಕೆಯನ್ನು ಚಂದ್ರಘಂಟೆಯೆಂಬ ಹೆಸರು ಬಂದಿದೆ. ಈ ತಾಯಿಯನ್ನು ಚಂದ್ರಿಕಾ, ರಣಚಂಡಿಯೆಂದೂ ಕರೆಯುತ್ತಾರೆ. ಇವಳ ಆರಾಧನೆಯಿಂದ ಸಂಪತ್ತು ಹಾಗೂ ಸಮೃದ್ಧಿಯನ್ನು ಪಡೆಯಬಹುದು. ಈಕೆಯ ಆಶೀರ್ವಾದದಿಂದ ಮನೆಯಲ್ಲಿ ಎಂದಿಗೂ ಆಹಾರದ ಕೊರತೆ ಎದುರಾಗದು ಎಂಬ ನಂಬಿಕೆ ಭಕ್ತರದ್ದು.
ದುರ್ಗಾ ಮಾತೆಗೆ ಚಂದ್ರಘಂಟ ಎಂಬ ಹೆಸರು ಏಕೇ ಬಂತು ಅನ್ನೊದನ್ನ ತಿಳಿಯೊಣ ಬನ್ನಿ.
ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟಾ ರೂಪದಲ್ಲಿ ನೋಡಬಹುದು. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುವಲ್ಲಿ ಸಫಲರಾಗುತ್ತಾರೆ. ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.