ಶಿರಾ: ಆಕಾಶದ ಮಳೆ, ಭೂಮಿ ತಾಯಿಯ ಬೆಳೆಯನ್ನೆ ನಂಬಿಕೊAಡು ಬದುಕುತ್ತಿರುವ ಬಯಲು ಸೀಮೆಯ ರೈತರಿಗೆ ಈ ಭಾರಿ ಹೆಚ್ಚು ಮಳೆಯಾಗಿರುವುದು ಒಂದೆಡೆ ಸಂತೋಷವಾದರೆ, ಮತ್ತೊಂದೆಡೆ ಸಂಕಟ ತಂದಿದೆ. ಶಿರಾ ತಾಲ್ಲೂಕಿನ ಹೆಂದೊರೆ ಗ್ರಾಮದ ರೈತ ಮುದ್ದಪ್ಪ, ಯಶೋದಮ್ಮ ದಂಪತಿಗಳು ಭೂಮಿಯನ್ನೆ ನಂಬಿ ಬಿಸಿಲು ಮಳೆ ಎನ್ನದೆ ೨ ಎಕರೆ ಭೂಮಿಯಲ್ಲಿ ರೂ ೨ ಲಕ್ಷ ಸಾಲಮಾಡಿ ಮಾಡಿ, ಈರುಳ್ಳಿ ಬೀಜ ಬಿತ್ತಿ, ಕಳೆಕಿತ್ತು ರಕ್ಷಣೆ ಮಾಡಿದ್ದರು.
ಈರುಳ್ಳಿ ಫಸಲು ಉತ್ತಮವಾಗಿ ಬಂದಿತ್ತು. ಈರುಳ್ಳಿ ಕಿತ್ತುಹಾಕಿ ಬಳ್ಳಿ ಕತ್ತರಿಸುವ ವೇಳೆಗೆ ಕೈಗೆ ಬಂದ ತುತ್ತು ಬಾಯಿ ಬರಲಿಲ್ಲ. ಅಕಾಲಿಕವಾಗಿ ನಿರಂತರವಾಗಿ ಸುರಿದ ಮಳೆಗೆ ಸಿಲುಕಿ ಕಿತ್ತು ಹಾಕಿದ್ದ ಈರುಳ್ಳಿ ಮಳೆಯಲ್ಲಿ ನೆನೆದು ಮೊಳಕೆ ಒಡೆದಿದೆ. ಸಾಲು ಸಾಲಾಗಿ ಕಿತ್ತುಹಾಕಿದ್ದ ಈರುಳ್ಳಿ ಗೆಡ್ಡಗಳಲ್ಲಿ ಮೊಳಕೆ ಒಡೆದಿರುವುದನ್ನು ಕಂಡು ಕಂಬನಿ ಮಿಡಿದು ಕಂಗಾಲಾಗಿರುವ ರೈತ ದಂಪತಿಗಳು ಈರುಳ್ಳಿ ಕಟಾವು ಮಾಡಿ ಮಾರಾಟ ಮಾಡಿದ್ದರೆ ಅಂದಾಜು ರೂ ೪ ಲಕ್ಷ ಕೈಗೆಟುಕುತ್ತಿತ್ತು. ಸತತವಾಗಿ ಸುರಿದ ಜಡಿಮಳೆ ಅನ್ನದಾತನ ಬದುಕಿನ ಮೇಲೆ ಬರೆ ಎಳೆದಿದೆ.
ಅಲ್ಲದೆ ತನ್ನ ಜಮೀನಿನಲ್ಲಿ ಶೇಂಗಾ ಮತ್ತು ಹತ್ತಿ ಬೆಳೆದಿದ್ದ ಮುದ್ದಪ್ಪ-ಯಶೋದಮ್ಮ ದಂಪತಿಗಳ ಪಾಲಿಗೆ ಶೇಂಗಾ ಮತ್ತು ಹತ್ತಿಬೆಳೆಗಳು ಸಹ ಮಳೆಗೆ ಸಿಲುಕಿ ಬೆಳೆ ನಷ್ಟದಿಂದ ಪರಿತಪಿಸುವಂತಾಗಿದೆ. ಸಾಲಭಾದೆಯಿಂದ ಹೊರಬರಲಾರದೆ ದಂಪತಿಗಳು ಆಕಾಶದತ್ತ ಮುಖ ಮಾಡಿ ಕಂಬನಿ ಮಿಡಿದಿದ್ದಾರೆ.
ಕೃಷಿ, ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆಗಳ ಅಧಿಕಾರಿಗಳು ಮಳೆಗೆ ಸಿಲುಕಿ ಬೆಳೆ ಹಾನಿ ಉಂಟಾಗಿರುವ ರೈತರ ನೆರವಿಗೆ ಮುಂದಾಗಬೇಕು. ಸರ್ಕಾರ ಕೊಡಮಾಡಿರುವ ಬೆಳೆ ನಷ್ಟದತ್ತ ಗಮನಿಸಿ ಎಂದು ರೈತ ದಂಪತಿಗಳು ಕೈಮುಗಿದು ಸಾಲಭಾದೆಯಿಂದ ಋಣಮುಕ್ತರಾಗಲು ಸರ್ಕಾರದಿಂದ ಪರಿಹಾರ ಕೊಡಿಸಿಕೊಡಬೇಕು ಎಂದು ಬೇಡಿಕೊಳ್ಳುವ ದೃಶ್ಯ ಮನಕಲಕುವಂತಿತ್ತು. ಸರ್ಕಾರಿ ಅಧಿಕಾರಿಗಳು ರೈತರ ಜಮೀನುಗಳತ್ತ ಚಿತ್ತಹರಿಸಬೇಕಿದೆ ಎಂದು ರೈತರು ಮನವಿ ಮಾಡಿದ್ದಾರೆ.