Operation Sindoor || ಬೆಂಗಳೂರು ಏರ್ಪೋರ್ಟ್ನಲ್ಲಿ 29 ವಿಮಾನ ರದ್ದು

Operation Sindoor || ಬೆಂಗಳೂರು ಏರ್ಪೋರ್ಟ್ನಲ್ಲಿ 29 ವಿಮಾನ ರದ್ದು

ಬೆಂಗಳೂರು: ಭಾರತೀಯ ಸೇನೆ ಪಾಕಿಸ್ತಾನದಲ್ಲಿನ ಉಗ್ರರ ತಾಣಗಳ ಮೇಲೆ ಆಪರೇಷನ್ ಸಿಂಧೂರ ವೈಮಾನಿಕ ದಾಳಿ ಕೈಗೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 29 ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ ಎಂದು ಏರ್ಪೋರ್ಟ್ ಮೂಲಗಳು ತಿಳಿಸಿವೆ.\

ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಬುಧವಾರ ಮುಂಜಾನೆ ಪಾಕಿಸ್ತಾನ ಹಾಗೂ ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿತ್ತು. ಹೀಗಾಗಿ, ಕೆಲವಾಯುಯಾನ ಪ್ರದೇಶದಲ್ಲಿ ಹಾರಾಟಕ್ಕೆ ನಿರ್ಬಂಧ ಇರುವುದರಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ 29 ವಿಮಾನಗಳ ಹಾರಾಟ ರದ್ದಾಗಿದೆ.

ಇಂಡಿಗೋ ವಿಮಾನಯಾನ ಸಂಸ್ಥೆಯ 10 ವಿಮಾನಗಳ ಆಗಮನ 9 ನಿರ್ಗಮನ, ಏರ್ ಇಂಡಿಯಾ ಎಕ್ಸ್ ಪ್ರೆಸ್ನ 3 ಆಗಮನ 3 ನಿರ್ಗಮನ ಮತ್ತು ಏರ್ ಇಂಡಿಯಾದ 2 ಆಗಮನ 2 ನಿರ್ಗಮನ ವಿಮಾನಗಳ ಹಾರಾಟ ರದ್ದುಗೊಂಡಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಈ ಕುರಿತು ತನ್ನ ಎಕ್ಸ್ ಖಾತೆಯಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. ‘ಕೆಲ ವಾಯುಯಾನ ಪ್ರದೇಶಗಳಲ್ಲಿ ವಿಮಾನ ಹಾರಾಟಕ್ಕೆ ನಿರ್ಬಂಧ ಜಾರಿಯಲ್ಲಿದೆ. ಇದು ನಮ್ಮ ಸಂಪರ್ಕ ಜಾಲದಲ್ಲಿನ ಕೆಲವು ವಿಮಾನಗಳ ಸೇವೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮುನ್ನ, ತಾವು ಪ್ರಯಾಣ ಮಾಡಲಿರುವ ವಿಮಾನಗಳ ವೇಳಾಪಟ್ಟಿಗಳ ಕುರಿತು ಆಯಾ ವಿಮಾನಯಾನ ಸಂಸ್ಥೆಗಳ ಜೊತೆಗೆ ಸಂಪರ್ಕಿಸಿ, ಪರಿಶೀಲಿಸಿಕೊಳ್ಳಬೇಕು” ಎಂದು ಪ್ರಯಾಣಿಕರಿಗೆ ವಿನಂತಿ ಮಾಡಿದೆ.

ಪ್ರಯಾಣಿಕರು ತಮ್ಮ ವಿಮಾನಗಳ ವೇಳಾಪಟ್ಟಿಯಲ್ಲಿನ ಬದಲಾವಣೆಗಳನ್ನು ಆಯಾ ವಿಮಾನಯಾನ ಸಂಸ್ಥೆಗಳ ಅಧಿಕೃತ ಎಕ್ಸ್ ಖಾತೆಗಳ ಮೂಲಕ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *