ಉಪ್ಪಿನಂಗಡಿ: ಅಡಿಕೆ ಮರಗಳನ್ನು ಬಾಧಿಸುತ್ತಿರುವ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಬಾರದೆ ಬೆಳೆಗಾರರು ಕಂಗಾಲಾಗಿದ್ದಾರೆ. ರೋಗ ಬಾಧೆಯಿಂದ ಇಳುವರಿ ಕಡಿಮೆಯಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಸರ್ಕಾರದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ರೋಗ ತಡೆಗೆ ಪ್ರಯತ್ನ ಪಡುತ್ತಿದ್ದರೂ ಸಾಧ್ಯವಾಗಿಲ್ಲ.
ಈಗಾಗಲೇ ಹಲವಾರು ರೈತರು ಆತಂಕ, ನೋವನ್ನು ತೋಡಿಕೊಂಡಿದ್ದಾರೆ. ಅಡಿಕೆಯ ಗರಿ ಒಣಗಿ ಹೋಗಿದ್ದು, ಅಡಿಕೆ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ಹಲವಾರು ಕುಟುಂಬಗಳು ಬೆಳೆ ಇಲ್ಲದೆ ಆತಂಕಕ್ಕೆ ಒಳಗಾಗಿದ್ದಾರೆ.
ಅಡಿಕೆ ಗರಿಯಲ್ಲಿ ಕಂದು ಬಣ್ಣದ ಸಣ್ಣ ಚುಕ್ಕಿ ಮೂಡಿ, ಹಳದಿ ಬಣ್ಣವಾಗುತ್ತದೆ. ಕೆಲವೊಮ್ಮೆ ಕಪ್ಪು ಬಣ್ಣದ ಅಂಚು ಇರುವ ಬೂದು ಬಣ್ಣದ ಸಣ್ಣ ಚುಕ್ಕಿಗಳೂ ಮೂಡುತ್ತವೆ. ಸಣ್ಣ ಚುಕ್ಕಿಗಳು ದೊಡ್ಡದಾಗಿ, ಇಡೀ ಗರಿಗೆ ವ್ಯಾಪಿಸಿದಾಗ ಗರಿ ಒಣಗುತ್ತದೆ. ರೋಗ ತೀವ್ರತೆ ಹೆಚ್ಚಾದಾಗ ನಾಲ್ಕೈದು ಎಲೆಗಳಿಗೆ ಹಬ್ಬುತ್ತದೆ. ಹೆಚ್ಚು ಗಾಳಿ ಇರುವ ಪ್ರದೇಶದಲ್ಲಿ ಎಲೆಯಲ್ಲಿ ಕಡ್ಡಿ ಮಾತ್ರ ಉಳಿಯುತ್ತದೆ.
ಈ ಹಿಂದೆ ಕೆಲವೇ ತೋಟಗಳಿಗೆ ಸೀಮಿತವಾಗಿದ್ದ ರೋಗಲಕ್ಷಣ, ಕ್ರಮೇಣ ಹಲವು ತೋಟಗಳಿಗೆ ಹಬ್ಬಿದೆ. ಗಾಳಿ ಮೂಲಕ ಹರಡುವ ಕಾರಣ, ಪ್ರಾಥಮಿಕ ಹಂತದಲ್ಲೇ ನಿರ್ವಹಣೆ ಮಾಡದಿದ್ದರೆ ಇದನ್ನು ನಿಯಂತ್ರಿಸುವುದು ಕಷ್ಟ ಎನ್ನುತ್ತಾರೆ ರೈತರು.
ಈ ರೋಗ ಬಾಧೆಗೆ ಶಿಲೀಂದ್ರಗಳೇ ಕಾರಣ ಎಂದು ಹೇಳುವ ಈ ಶಿಲೀಂದ್ರವು ಅಡಿಕೆಯಲ್ಲಿ ಹಿಂಗಾರ ಒಣಗುವ ರೋಗವನ್ನೂ ಉಂಟು ಮಾಡುತ್ತದೆ. ಈ ಶಿಲೀಂದ್ರದ ವಿವಿಧ ತಳಿಗಳು ಬಾಧಿಸುವ ಸಂಕೀರ್ಣ ರೋಗವಿದು. ಹಿಂಗಾರ ಒಣಗುವ ರೋಗದಿಂದ ಒಂದು ವರ್ಷದ ಫಸಲು ಮಾತ್ರ ನಷ್ಟವಾಗುತ್ತದೆ. ಆದರೆ, ಎಲೆ ಚುಕ್ಕಿ ರೋಗದಿಂದ ಇಳುವರಿ ಕಡಿಮೆಯಾಗಿ ಉತ್ಪಾದನೆ ಕುಂಠಿತವಾಗುತ್ತದೆ. ಇದು ಮರದ ಬೆಳವಣಿಗೆ ಮತ್ತು ಇಳುವರಿಯ ಮೇಲೆ ದೀರ್ಘ ಕಾಲ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಬೆಳೆಗಾರರು.
ಅಧಿಕ ರೋಗಬಾಧಿತ ಎಲೆಗಳನ್ನು ಕತ್ತರಿಸಿ ನಾಶ ಮಾಡುವುದರಿಂದ ಸೋಂಕು ಕಡಿಮೆಗೊಳಿಸಲು ಸಾಧ್ಯ. ರೋಗಬಾಧಿತ ತೋಟಗಳಲ್ಲಿ ಅಡಿಕೆ ಗೊನೆಗಳಿಗೆ ಬೋರ್ಡೊ ಮಿಶ್ರಣ ಸಿಂಪಡಣೆ ಮಾಡುವಾಗ, ಎಲೆಗಳಿಗೂ ಸಿಂಪಡಿಸಬೇಕು. ಹೆಚ್ಚು ಬಾಧೆಯಿರುವ ತೋಟಗಳಲ್ಲಿ, ಆಗಸ್ಟ್, ಸೆಪ್ಟೆಂಬರ್ ಸಮಯದಲ್ಲಿ ಮಳೆ ಇಲ್ಲದಾಗ ಪ್ರೋಪಿಕೊನರೋಲ್ ಶಿಲೀಂದ್ರನಾಶಕವನ್ನು ಎಲೆಗಳಿಗೆ ಸಿಂಪಡಿಸಬೇಕು ಎನ್ನುತ್ತಾರೆ ಅನುಭವಿ ರೈತರು.
ಶಾಶ್ವತ ಪರಿಹಾರ ಬೇಕು: ನನ್ನ ತೋಟದಲ್ಲಿ ಈ ರೋಗವು ಎರಡು ವರ್ಷಗಳ ಹಿಂದೆಯೇ ಪ್ರಾರಂಭವಾಗಿತ್ತು. ಪ್ರಾರಂಭದಲ್ಲಿ ಬೆರಳೆಣಿಕೆ ಮರಗಳಲ್ಲಿ ಕಂಡು ಬಂದಿರುವ ರೋಗ ಇದೀಗ ಸುಮಾರು ನೂರು ಮರಗಳಿಗೆ ಬಾಧಿಸಿದೆ. ಅಡಿಕೆಯ ಗರಿ ಕೆಂಪಾಗಿ ಮುರಿದಿರುವ ಸ್ಥಿತಿಯಲ್ಲಿ ಕಂಡು ಬರುತ್ತಿದೆ. ಈ ಮರಗಳಲ್ಲಿ ಇಳುವರಿ ಇಲ್ಲ. ಇದು ಇನ್ನೊಂದು ಮರಕ್ಕೆ ಹಬ್ಬುತ್ತಲೇ ಇದೆ. ಸರ್ಕಾರ ಸ್ಪಂದಿಸಿ ಈ ರೋಗ ನಿರ್ಮೂಲನೆಗೆ ಶಾಶ್ವತ ಕ್ರಮ ಕೈಗೊಳ್ಳುವ ಮೂಲಕ ನಮ್ಮನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಹೊಸಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ದೇವಾಡಿಗ ಆಗ್ರಹಿಸಿದರು.
ಶಿಲೀಂದ್ರನಾಶಕಕ್ಕೆ ಬೇಡಿಕೆ ಸಲ್ಲಿಸಲಾಗಿದೆ: ಈಗಾಗಲೇ ಅಡಿಕೆ ಎಲೆಚುಕ್ಕಿ ರೋಗದ ಬಗ್ಗೆ ಮಾಹಿತಿ ಬಂದಿದೆ. ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಲಭ್ಯವಿರುವಷ್ಟು ಶಿಲೀಂದ್ರನಾಶಕವನ್ನು ವಿತರಿಸಲಾಗಿದೆ. ಇನ್ನೂ ಬೇಡಿಕೆ ಇರುವ ಶಿಲೀಂದ್ರನಾಶಕ ಖರೀದಿಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ರೇಖಾ ತಿಳಿಸಿದರು.