ಸೇಡಂ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ತೊಟ್ನಳ್ಳಿ ಗ್ರಾಮದ ಮಹಾಂತೇಶ್ವರ ಮಠದ ಆಸ್ತಿ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ನಮೂದು ಆಗಿದ್ದನ್ನು ವಿರೋಧಿಸಿ ತ್ರಿಮೂರ್ತಿ ಶಿವಾಚಾರ್ಯರು ಬುಧವಾರ ಪಾದಯಾತ್ರೆ ಆರಂಭಿಸುವ ಮುನ್ನವೇ ಪಹಣಿಯಲ್ಲಿನ ವಕ್ಫ್ ಹೆಸರು ತೆಗೆದು ಹಾಕಲಾಗಿದೆ.
ಮಠದ ತ್ರಿಮೂರ್ತಿ ಶಿವಾಚಾರ್ಯರ ಹೆಸರಿನಲ್ಲಿ 5.24 ಎಕರೆ ಆಸ್ತಿ ಇದೆ. 2018ರಲ್ಲಿ ಮಠದ ಪಹಣಿಯಲ್ಲಿ ಅಶುರ್ಖನ್ನ ವಕ್ಫ್ ಎಂದು ಸೇರ್ಪಡೆಯಾಗಿತ್ತು. ಇದರ ವಿರುದ್ಧ ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದರು.
ತೊಟ್ನಳ್ಳಿ ಗ್ರಾಮದ ಮಹಾಂತೇಶ್ವರ ಮಠದ ತ್ರಿಮೂರ್ತಿ ಶಿವಾಚಾರ್ಯರು ಮಠ-ಮಂದಿರಗಳು ಮತ್ತು ರೈತರ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಮಂಡಳಿ ಹೆಸರು ತೆಗೆಯುವುವಂತೆ ಒತ್ತಾಯಿಸಿ ಬುಧವಾರ ಪಾದಯಾತ್ರೆ ಆರಂಭಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ವಕ್ಫ್ ಮಂಡಳಿ ಹಾಗೂ ಸ್ಥಳೀಯ ಅಧಿಕಾರಿಗಳು ಮಠದ ಪಹಣಿಯಿಂದ ವಕ್ಫ್ ಹೆಸರು ತೆಗೆದುಹಾಕಿದ್ದಾರೆ.
ಬುಧವಾರ ಬೆಳಿಗ್ಗೆ ತ್ರಿಮೂರ್ತಿ ಶಿವಾಚಾರ್ಯರು ಪಾದಯಾತ್ರೆ ನಡೆಸದಂತೆ ಕೆಲವು ಮುಖಂಡರು ಮನವೊಲಿಸಲು ಪ್ರಯತ್ನಿಸಿದ್ದರು. ಇದಕ್ಕೆ ಒಪ್ಪದ ಶಿವಾಚಾರ್ಯರು, ಎಲ್ಲ ರೈತರ ಪಹಣಿಗಳಲ್ಲಿನ ವಕ್ಫ್ ಮಂಡಳಿ ಹೆಸರು ತೆಗೆಯುವಂತೆ ಪಟ್ಟುಹಿಡಿದು ಪಾದಯಾತ್ರೆ ನಡೆಸುತ್ತಿದ್ದಾರೆ.